ಬೆಂಗಳೂರು : ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಕೃಷಿ ತಾಪಂಡ ಗೆಳೆಯ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಕೃಷಿ ಮನೆಯಲ್ಲೇ ವೈಶಾಕ್ ತಂಗಿದ್ದ. ಆ ಸಮಯದಲ್ಲಿ ಕೃಷಿ ನಿವಾಸದಲ್ಲಿ ಇರಲಿಲ್ಲ. ಈ ವೇಳೆ ನಟಿಗೆ ಕರೆ ಮಾಡಿ ತಾನು ಸಾಯುವುದಾಗಿ ವೈಶಾಕ್ ಹೇಳಿಕೊಂಡಿದ್ದ. ತಕ್ಷಣ ಕೃಷಿ ಈ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದರು. ಆ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಫೆಬ್ರವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿ ಅವರಿಗೆ ಅನಾಮಧೇಯ ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಈ ಪತ್ರವನ್ನು ಕಳುಹಿಸಲಾಗಿತ್ತು. ಪತ್ರದಲ್ಲಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇತ್ತೀಚೆಗೆ ಕೃಷಿ ತಾಪಂಡ ಅವರು ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್, ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಬರೆದಿದ್ದ.
‘ಕೃಷಿ ಜೊತೆ ಇರುವ ಸಮಸ್ಯೆಯನ್ನು ನೀನು ತಕ್ಷಣ ಬಗೆಹರಿಸಿಕೊಳ್ಳಬೇಕು. ಅದರೊಂದಿಗೆ ಕ್ಷಮಾಪಣೆ ಪತ್ರ ಮತ್ತು 6 ರಿಂದ 7 ಕೋಟಿ ರೂಪಾಯಿ ಹಣವನ್ನು ಕಳುಹಿಸಬೇಕು. ಇಲ್ಲವಾದಲ್ಲಿ ನೀನು ಬೇರೆ ಬೇರೆ ರೀತಿಯ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಉದ್ಯಮಿಗೆ ನೇರವಾಗಿ ಬೆದರಿಕೆ ಹಾಕಲಾಗಿತ್ತು. ಈ ಪತ್ರವನ್ನು ನೋಡಿ ಆತಂಕಗೊಂಡ ಅರವಿಂದ ರೆಡ್ಡಿ ಅವರು ಪೊಲೀಸರಿಗೆ ದೂರು ನೀಡಿದ್ದರು.
ಅರವಿಂದ ರೆಡ್ಡಿ ನೀಡಿದ ದೂರಿನ ಮೇರೆಗೆ ಎಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಈ ವೇಳೆ ವೈಶಾಕ್ ಸಿಕ್ಕಿ ಬಿದ್ದಿದ್ದರು.



















