ಚಿಕ್ಕಬಳ್ಳಾಪುರ: ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಜೋಡಿಯೊಂದು ಕೊನೆಗೂ ಪೊಲೀಸ್ ಠಾಣೆಯಲ್ಲೇ ಅಧಿಕೃತವಾಗಿ ಮದುವೆಯಾಗಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರುಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿಡ್ಲಘಟ್ಟ ತಾಲೂಕಿನ ದಡಂಘಟ್ಟ ಗ್ರಾಮದ ನಿವಾಸಿಗಳಾದ ಶರಣ್ ಕುಮಾರ್ (25) ಮತ್ತು ಶ್ರೀವಲ್ಲಿ (23) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಇಬ್ಬರೂ ವಿವಾಹವಾಗಿದ್ದರು ಎನ್ನಲಾಗಿದೆ.
ಆದರೆ, ಅಂತರ್ಜಾತಿ ವಿವಾಹಕ್ಕೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಮದುವೆಯ ನಂತರ ಯುವಕ ನಾಪತ್ತೆಯಾಗಿದ್ದು, ಇದರಿಂದ ಆತಂಕಗೊಂಡ ಯುವತಿ ಮಹಿಳಾ ಸಾಂತ್ವನ ಕೇಂದ್ರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ದಿಬ್ಬೂರುಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದರು. ತನಿಖೆ ವೇಳೆ ಇಬ್ಬರೂ ತಮ್ಮ ಇಚ್ಛೆಯಂತೆ ಮದುವೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪೊಲೀಸ್ ಠಾಣೆಯಲ್ಲೇ ಕುಟುಂಬ ಸದಸ್ಯರು ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳನ್ನು ನೆರವೇರಿಸಲಾಯಿತು.
ಈ ಮೂಲಕ ಹಲವು ದಿನಗಳಿಂದ ಅನಿಶ್ಚಿತತೆಯಲ್ಲಿದ್ದ ಪ್ರೇಮಿಗಳ ಜೀವನಕ್ಕೆ ಹೊಸ ತಿರುವು ಸಿಕ್ಕಿದ್ದು, ಠಾಣೆಯಲ್ಲೇ ನಡೆದ ಈ ಮದುವೆ ಸ್ಥಳೀಯರ ಗಮನ ಸೆಳೆದಿದೆ.



















