ಬೀದರ್ : ಬೀದರ್‌ನ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲೇ ಯುವ ವೈದ್ಯನ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆ ವಿಚಾರವಾಗಿ ಉಂಟಾದ ವಾಗ್ವಾದದ ಬಳಿಕ 4 ರಿಂದ 5 ಜನ ಯುವಕರ ಗುಂಪು ವೈದ್ಯನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ನಿನ್ನೆ ತಡರಾತ್ರಿ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿಯೇ ವೈದ್ಯರಿಗೆ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ಹಲ್ಲೆಗೊಳಗಾದ ಯುವ ವೈದ್ಯನನ್ನು ತುಕಾರಾಮ್ ಎಂದು ಗುರುತಿಸಲಾಗಿದ್ದು, ಅವರನ್ನು ಬ್ರಿಮ್ಸ್ ಆಸ್ಪತ್ರೆಯ SICU ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಪ್ರಕಾರ, ತಡರಾತ್ರಿ ಬೈಕ್‌ನಿಂದ ಬಿದ್ದು ಅಲ್ಪ ಗಾಯಗೊಂಡಿದ್ದ ಕೆಲ ಯುವಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಇದೇ ವೇಳೆ ಚಿಕಿತ್ಸೆ ಪ್ರಕ್ರಿಯೆ ಹಾಗೂ ಎಂಎಲ್‌ಸಿ ವಿಚಾರವಾಗಿ ವೈದ್ಯರು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಅದು ಹಲ್ಲೆಗೆ ತಿರುಗಿದೆ ಎನ್ನಲಾಗಿದೆ.
ವೈದ್ಯ ತುಕಾರಾಮ್ ನೀಡಿರುವ ಹೇಳಿಕೆಯ ಪ್ರಕಾರ, ಆಸ್ಪತ್ರೆಗೆ ಬಂದಿದ್ದ ಯುವಕರ ಗುಂಪು “ಎಂಎಲ್‌ಸಿ ಮಾಡಬೇಡಿ” ಎಂದು ತಿಳಿಸಿತ್ತು. ಅದರಂತೆ ಎಂಎಲ್‌ಸಿ ಮಾಡದೇ ಚಿಕಿತ್ಸೆ ನೀಡಲಾಗಿತ್ತು. ಆದರೆ ನಂತರ “ಎಂಎಲ್‌ಸಿ ಏಕೆ ಮಾಡಿದ್ದೀರಿ” ಎಂದು ಆರೋಪಿಸಿ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. 4-5 ಜನರ ಗುಂಪು ವೈದ್ಯನ ಮೇಲೆ ಬೇಕಾಬಿಟ್ಟಿ ಹಲ್ಲೆ ನಡೆಸಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವೈದ್ಯರ ಭದ್ರತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಇದನ್ನೂ ಓದಿ : ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ ; ಸವಾರನಿಗೆ ಗಂಭೀರ ಗಾಯ!



















