ಬೆಂಗಳೂರು : ಕಳೆದ ಮೂರು ದಿನಗಳಿಂದ ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಶನಿವಾರ (ಮೇ 222) ಭಾರಿ ಇಳಿಕೆ ಕಂಡಿದ್ದು, ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ದೊರೆತಿದೆ. ಬೆಂಗಳೂರಿನಲ್ಲಿ ಶನಿವಾರ ಅಪರಂಜಿ (24 ಕ್ಯಾರೆಟ್) ಚಿನ್ನದ ಬೆಲೆಯಲ್ಲಿ 1 ಗ್ರಾಂಗೆ 44 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ಗ್ರಾಂಗೆ 40 ರೂಪಾಯಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಬಂಗಾರದ ಧಾರಣೆಯಲ್ಲಿ ಏರಿಕೆಯಾಗಿದ್ದು ಗ್ರಾಹಕರಿಗೆ ಹೊರೆಯಾಗಿತ್ತು. ಈಗ ಜನ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಇದರೊಂದಿಗೆ ರಾಜ್ಯ ರಾಜಧಾನಿಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 1,59,490 ರೂಪಾಯಿಗೆ ಇಳಿದಿದೆ. ಇದೇ ರೀತಿ, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 1,46,200 ರೂಪಾಯಿಗೆ ಇಳಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 330 ರೂಪಾಯಿ ಏರಿಕೆಯಾಗಿತ್ತು. ಗ್ರಾಹಕರಲ್ಲಿ ಇನ್ನಷ್ಟು ಏರಿಕೆಯಾಗುವ ಆತಂಕ ಎದುರಾಗಿತ್ತು. ಈಗ ಸ್ವಲ್ಪ ಇಳಿಕೆ ಕಂಡಿದ್ದು, ಸಮಾರಂಭ ಸೇರಿ ಹಲವು ಕಾರಣಗಳಿಗಾಗಿ ಚಿನ್ನ ಖರೀದಿಸುವವರು ನಿರಾಳರಾಗಿದ್ದಾರೆ.
ಬೆಳ್ಳಿಯ ಬೆಲೆ ಸ್ಥಿರ
ಚಿನ್ನದ ಬೆಲೆಯಲ್ಲಿ ಏರಿಕೆಯಾದರೆ, ಶನಿವಾರ ಬೆಳ್ಳಿಯ ದರದಲ್ಲಿ ಸ್ಥಿರತೆ ಇದೆ. ಅಂದರೆ, ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಕೆ.ಜಿ ಬೆಳ್ಳಿಯ ಬೆಲೆಯು 2.85 ಲಕ್ಷ ರೂಪಾಯಿ ಇದೆ. ಮೇ 21ರಂದು ಬೆಳ್ಳಿ ಧಾರಣೆಯಲ್ಲಿ 5 ಸಾವಿರ ರೂಪಾಯಿ ಜಾಸ್ತಿಯಾಗಿತ್ತು.
ಅಮೆರಿಕ-ಇರಾನ್ ಬಿಕ್ಕಟ್ಟಿನಿಂದಾಗಿ ದೇಶದ ಜನ ಇನ್ನೊಂದು ವರ್ಷ ಚಿನ್ನ ಖರೀದಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆ, ವಿದೇಶಿ ವಿನಿಮಯ ಮೀಸಲು ರಕ್ಷಣೆ ದೃಷ್ಟಿಯಿಂದ ಮೋದಿ ಅವರು ಹಲವು ಕರೆ ನೀಡಿದ್ದಾರೆ. ಇದರಿಂದಾಗಿ ದೇಶದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ್ಯು ಕುಸಿದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಎಂಡಿ, ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಗುಡ್ ನ್ಯೂಸ್ : ESICಯಲ್ಲಿ 118 ಹುದ್ದೆಗಳ ನೇಮಕಾತಿ


















