ಚಿಕ್ಕಬಳ್ಳಾಪುರ: ಸಂಬಂಧಿಕರ ಮದುವೆ ಕಾರ್ಯಕ್ಕಾಗಿ ಚಿನ್ನಾಭರಣವನ್ನು ಒತ್ತೆಯಿಟ್ಟು ಹಣ ತೆಗೆದುಕೊಂಡು ಬೆಂಗಳೂರಿಗೆ ಹೊರಟಿದ್ದ ಕುಟುಂಬವೊಂದರ ಮೇಲೆ ಫಿಲ್ಮಿ ಸ್ಟೈಲ್‌ನಲ್ಲಿ ದರೋಡೆ ಯತ್ನ ನಡೆದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೆ.ವಿ ಕ್ಯಾಂಪಸ್ ಬಳಿ ನಡೆದಿದೆ.
ಆಂಧ್ರ ಮೂಲದ ಉಷಾ ಹಾಗೂ ಅವರ ಇಬ್ಬರು ಮಕ್ಕಳು ಮದುವೆ ಕಾರ್ಯಕ್ಕೆ ಹಣ ನೀಡಲು ಆಂಧ್ರದಿಂದ ಬೆಂಗಳೂರಿನತ್ತ ಕಾರಿನಲ್ಲಿ ಹೊರಟಿದ್ದರು. ದಾರಿ ಮಧ್ಯೆ ಚಿಕ್ಕಬಳ್ಳಾಪುರದ ಬಳಿ ತಿಂಡಿ ತಿನ್ನಲು ಕಾರು ನಿಲ್ಲಿಸಿ ಬಾಗಿಲು ತೆರೆದಿದ್ದಾಗಲೇ ಮೂವರು ಅಪರಿಚಿತ ಯುವಕರು ಕಾರಿನಲ್ಲಿದ್ದ ಹಣದ ಬ್ಯಾಗ್ ಕದ್ದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ಈ ವೇಳೆ ಉಷಾ ಅವರ ಮಕ್ಕಳು ಜೋರಾಗಿ ಕೂಗಿದ್ದು, ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಸ್ಥಳೀಯ ಯುವಕರು ಕಳ್ಳರ ಹಿಂದೆ ಬೆನ್ನಟ್ಟಿದ್ದಾರೆ. ಯುವಕರ ಸಹಾಯದಿಂದ ಇಬ್ಬರು ಕಳ್ಳರನ್ನು ಹಿಡಿದು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ ಮತ್ತೊಬ್ಬ ಆರೋಪಿ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ.
ಕಾರಿನಲ್ಲಿ ಹಣ ಇರುವ ಮಾಹಿತಿ ಕಳ್ಳರಿಗೆ ಹೇಗೆ ತಿಳಿದುಬಂದಿತು ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮತ್ತೊಂದೆಡೆ ಬಂಧಿತ ಆರೋಪಿಗಳು ಕಾರಿನಲ್ಲಿದ್ದವರ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಸಿಲಿಂಡರ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ



















