ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿರುವ ವಸುಂಧರಾ ಪೊಲೀಸ್ ಚೌಕಿ ಬಳಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ಸಂಭವಿಸಿದ ಸ್ಫೋಟವು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಈ ಘಟನೆಯಲ್ಲಿ ಪೊಲೀಸ್ ಚೌಕಿಯ ಎರಡು ಗಾಜುಗಳು ಒಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ.
ಸ್ಫೋಟದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿದ್ದ ‘ಘಾಜಿ 2’ ಎಂಬ ಖಾತೆಯಿಂದ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಈ ಸ್ಫೋಟದ ಹೊಣೆಯನ್ನು ‘ತೆಹ್ರೀಕ್-ಉಲ್-ಮುಜಾಹಿದೀನ್ ಹಿಂದುಸ್ತಾನ್’ ಸಂಘಟನೆ ಹೊತ್ತುಕೊಂಡಿದೆ. ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಪೊಲೀಸ್ ಚೌಕಿಯನ್ನು ಸಂಪೂರ್ಣವಾಗಿ ಸ್ಫೋಟಿಸುವುದಾಗಿಯೂ ಆ ಖಾತೆಯಲ್ಲಿ ಬೆದರಿಕೆ ಒಡ್ಡಲಾಗಿದೆ. ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಎಟಿಎಸ್, ವಿಧಿವಿಜ್ಞಾನ ತಂಡ ದೌಡು
ಘಟನೆ ನಡೆದ ಸ್ಥಳಕ್ಕೆ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಅಥವಾ ಪಟಾಕಿ ಅವಶೇಷಗಳು ಸದ್ಯಕ್ಕೆ ಪತ್ತೆಯಾಗಿಲ್ಲ. ಆದರೂ ಸ್ಫೋಟಕ್ಕೆ ಟೈಮರ್ ಅಥವಾ ಸ್ಫೋಟಕ ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ವಿಧಿವಿಜ್ಞಾನ (Forensic) ತಜ್ಞರು ಮತ್ತು ಸ್ಫೋಟಕ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದರ ಜೊತೆಗೆ ಉತ್ತರ ಪ್ರದೇಶದ ಉಗ್ರನಿಗ್ರಹ ಪಡೆ (ಎಟಿಎಸ್) ಕೂಡ ಸ್ಥಳಕ್ಕೆ ದೌಡಾಯಿಸಿ ತನಿಖೆಯನ್ನು ಚುರುಕುಗೊಳಿಸಿದೆ.
ಪೊಲೀಸರೇ ಉಗ್ರರ ಗುರಿ?
ಇತ್ತೀಚೆಗೆ ಉತ್ತರ ಪ್ರದೇಶದ ಪೊಲೀಸರು ಪಾಕಿಸ್ತಾನದ ಐಎಸ್ಐ (ISI) ಹಾಗೂ ಶಹಜಾದ್ ಭಟ್ಟಿ ಲಿಂಕ್ ಹೊಂದಿದ್ದ ಉಗ್ರ ಮಾಡ್ಯೂಲ್ ಒಂದನ್ನು ಭೇದಿಸಿದ್ದರು. ರಾಜ್ಯದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಮಿತಾಭ್ ಯಶ್ ತಿಳಿಸಿದ್ದರು. ಈ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ, ಪ್ರಸ್ತುತ ಸಂಭವಿಸಿರುವ ಸ್ಫೋಟವನ್ನು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

















