ಸೂರತ್: ಕೇವಲ 30,000 ರೂಪಾಯಿ ಸಾಲದ ಹಣ ಹಿಂತಿರುಗಿಸಲಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡು ಸಹೋದ್ಯೋಗಿಯೊಬ್ಬನ ತಲೆಯನ್ನೇ ಕಡಿದು, ಹತ್ಯೆಗೈದು ದೇಹ ಮತ್ತು ಶಿರವನ್ನು ಬೇರೆ ಬೇರೆ ಕಡೆ ಎಸೆದ ಆಘಾತಕಾರಿ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಒಡಿಶಾ ಮೂಲದ ಸಚಿತ್ ಕುಮಾರ್ ನರೇಂದ್ರ ಬಾಲ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸೂರತ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸ್ಮಶಾನದಲ್ಲಿ ಪತ್ತೆಯಾದ ಬೆತ್ತಲೆ ದೇಹ
ನ.3ರಂದು ಸೂರತ್ನ ಗೊಟ್ಲಾವಾಡಿ ಜಂಕ್ಷನ್ ಬಳಿಯ ಸ್ಮಶಾನವೊಂದರಲ್ಲಿ ತಲೆಯಿಲ್ಲದ, ಬೆತ್ತಲೆ ಸ್ಥಿತಿಯಲ್ಲಿದ್ದ ಪುರುಷನ ಶವವೊಂದು ಬಿದ್ದಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಇದು ಎರಡು ದಿನಗಳ ಹಿಂದೆ ನಡೆದ ಕೊಲೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿ ಸಚಿತ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯಾಂಶ ಹೊರಬಂದಿದೆ.
ಕೃತ್ಯ ಒಪ್ಪಿಕೊಂಡ ಆರೋಪಿ
ಪೊಲೀಸರ ಕಠಿಣ ವಿಚಾರಣೆಯ ವೇಳೆ ಆರೋಪಿ ಸಚಿತ್ ಕುಮಾರ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಮತ್ತು ಸಂತ್ರಸ್ತ ಇಬ್ಬರೂ ಸೂರತ್ನ ಪವರ್ಲೂಮ್ ಕಂಪನಿಯೊಂದರಲ್ಲಿ ಕಳೆದ ಆರು ತಿಂಗಳಿನಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸಂತ್ರಸ್ತನು ಆರೋಪಿಯಿಂದ 30,000 ರೂಪಾಯಿ ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸದೆ ಸಾಯಿಸುತ್ತಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿ, ಸಹೋದ್ಯೋಗಿಯ ತಲೆ ಕಡಿದು ಹತ್ಯೆ ಮಾಡಿದ್ದಾನೆ.
3 ಕಿಲೋಮೀಟರ್ ದೂರದಲ್ಲಿ ಬಿದ್ದಿತ್ತು ತಲೆ
ಕೊಲೆ ಮಾಡಿದ ಬಳಿಕ ಆರೋಪಿಯು ಶವದ ಮುಂಡವನ್ನು ಸ್ಮಶಾನದಲ್ಲಿ ಎಸೆದರೆ, ಆತನ ತಲೆಯನ್ನು ಸುಮಾರು 3 ಕಿಲೋಮೀಟರ್ ದೂರದಲ್ಲಿದ್ದ ಅಲ್ಕಾಪುರಿ ರೈಲ್ವೆ ಮೇಲ್ಸೇತುವೆಯ ಕೆಳಗಿನ ರೈಲ್ವೆ ಹಳಿಗಳ ಬಳಿ ಎಸೆದಿದ್ದಾಗಿ ತಿಳಿಸಿದ್ದಾನೆ. ಆರೋಪಿ ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಕಡಿದು ಹಾಕಲಾಗಿದ್ದ ತಲೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಮೃತದೇಹ ಮತ್ತು ಶಿರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.


















