ನಾಗ್ಪುರ: ಮದುವೆಗಾಗಿ ನಿರಂತರವಾಗಿ ಒತ್ತಾಯಿಸುತ್ತಿದ್ದ 38 ವರ್ಷದ ವಿವಾಹಿತ ಮಹಿಳೆಯೊಬ್ಬಳನ್ನು ಆಕೆಯ ಪ್ರೇಮಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರ ದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ತಲೆಯ ಮೇಲೆ ಭಾರವಾದ ವಸ್ತುವಿನಿಂದ ಹೊಡೆದು, ನಂತರ ರೂಮ್ ಹೀಟರ್ ಬಳಸಿ ಮೃತದೇಹವನ್ನು ಸುಟ್ಟುಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ರಾವರ್ ತಹಶೀಲ್ ನಿವಾಸಿಯಾದ ಜಾವೇದ್ ಶೇಖ್ ಶಾಹಿದ್ ಮನ್ಯಾರ್ (33) ಬಂಧಿತ ಆರೋಪಿ. ಈತ ನಾಗ್ಪುರದಲ್ಲಿ ಎಸಿ (Air-Conditioner) ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ. ಮೃತ ಮಹಿಳೆಗೆ ಪತಿ ಹಾಗೂ 11 ಮತ್ತು 13 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಹಿಳೆ ಮತ್ತು ಜಾವೇದ್ ಕಳೆದ 15 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ತನಗೆ ಮದುವೆಯಾಗುವಂತೆ ಮಹಿಳೆ ಜಾವೇದ್ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಆದರೆ ಜಾವೇದ್ ಈಗಾಗಲೇ ವಿವಾಹಿತನಾಗಿದ್ದರಿಂದ ಇವರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಮಹಿಳೆಯ ಪತಿ ಕೆಲಸದ ನಿಮಿತ್ತ ತನ್ನ ಸ್ವಗ್ರಾಮಕ್ಕೆ ತೆರಳಿದ್ದ ಮತ್ತು ಮಕ್ಕಳು ತಮ್ಮ ಚಿಕ್ಕಪ್ಪನ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಜಾವೇದ್ ಅಂದೇ ಸಂಜೆ ಆಕೆಯ ಮನೆಗೆ ಬಂದಿದ್ದ. ಈ ವೇಳೆ ಮದುವೆ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಆಕ್ರೋಶಗೊಂಡ ಜಾವೇದ್, ಮಹಿಳೆಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತಾನು ಮಾಡಿರುವ ಕೃತ್ಯವನ್ನು ಮುಚ್ಚಿಹಾಕಲು ರೂಮ್ ಹೀಟರ್ ಬಳಸಿ ಆಕೆಯ ದೇಹದ ಭಾಗಗಳನ್ನು ಸುಟ್ಟುಹಾಕಿದ್ದಾನೆ. ಕೃತ್ಯ ಎಸಗಿದ ಬಳಿಕ ರಾತ್ರಿಯಿಡೀ ರೈಲಿನಲ್ಲಿ ಜಲಗಾಂವ್ಗೆ ಪರಾರಿಯಾಗಿದ್ದ.
ಸತ್ಯ ಬಯಲಿಗೆಳೆದ ವೈದ್ಯಕೀಯ ವರದಿ
ಸೋಮವಾರ ಬೆಳಿಗ್ಗೆ ಮನೆಯ ವಾಪಸಾದ ಅಪ್ರಾಪ್ತ ಹೆಣ್ಣುಮಕ್ಕಳು ತಮ್ಮ ತಾಯಿ ಮೃತಪಟ್ಟಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಆರಂಭದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದರು. ಆದರೆ ಪ್ರಾಥಮಿಕ ವೈದ್ಯಕೀಯ ತಪಾಸಣಾ ವರದಿಯಲ್ಲಿ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದಿರುವುದು ಹಾಗೂ ಕೊಲೆ ನಡೆದಿರುವುದು ಸ್ಪಷ್ಟವಾಗಿದೆ. ಕೂಡಲೇ ಪೊಲೀಸರು ತನಿಖೆ ತೀವ್ರಗೊಳಿಸಿ, ಮಂಗಳವಾರ ಜಲಗಾಂವ್ನಲ್ಲಿ ಆರೋಪಿ ಜಾವೇದ್ನನ್ನು ಬಂಧಿಸಿ ನಾಗ್ಪುರಕ್ಕೆ ಕರೆತಂದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯನ್ನು ಅಕ್ಟೋಬರ್ 17ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ:ನೀಲಿ ಡ್ರಮ್ ಕೊಲೆ ಪ್ರಕರಣ: ಪತ್ನಿ, ಪ್ರೇಮಿಗೆ ಮರಣದಂಡನೆ ಶಿಕ್ಷೆ, ಜೈಲಿನಲ್ಲೇ ಪಾತಕಿಗಳ ಗೋಳಾಟ



















