ತೂತ್ತುಕುಡಿ (ತಮಿಳುನಾಡು): ಫೋನ್ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಶಂಕೆಯಿಂದ 23 ವರ್ಷದ ಯುವಕನೊಬ್ಬ ತನ್ನ 16 ವರ್ಷದ ಅಪ್ರಾಪ್ತೆ ಪ್ರಿಯತಮೆಯನ್ನು ಚಾಕುವಿನಿಂದ ಇರಿದು, ಕತ್ತು ಹಿಸುಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಮೃತ ಬಾಲಕಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿಯನ್ನು ಸ್ಥಳೀಯ ವೆಲ್ಡಿಂಗ್ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಮುತ್ತುರಾಜ ಎಂದು ಗುರುತಿಸಲಾಗಿದೆ. ಒಂದೇ ಪ್ರದೇಶದ ನಿವಾಸಿಗಳಾಗಿದ್ದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಬಾಲಕಿ ಫೋನ್ನಲ್ಲಿ ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಮುತ್ತುರಾಜ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಇದೇ ಸಮಯ ನೋಡಿಕೊಂಡು ಮನೆಗೆ ಬಂದ ಮುತ್ತುರಾಜ, ಮತ್ತೆ ಅದೇ ವಿಚಾರ ತೆಗೆದು ಜಗಳವಾಡಿದ್ದಾನೆ.
ಕೊಲೆ ಬಳಿಕ ತಾನೂ ಇರಿದುಕೊಂಡ ಆರೋಪಿ
ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದಾಗ, ಕೋಪಗೊಂಡ ಮುತ್ತುರಾಜ ಚಾಕುವಿನಿಂದ ಬಾಲಕಿಯ ಮೇಲೆ ಮನಸೋಇಚ್ಛೆ ಇರಿದು, ಬಳಿಕ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಪ್ರಿಯತಮೆ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ನಂತರ, ಅದೇ ಚಾಕುವಿನಿಂದ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಮನೆಯೊಳಗೇ ಕುಸಿದು ಬಿದ್ದಿದ್ದಾನೆ.
ಪೊಲೀಸರಿಂದ ತನಿಖೆ ಆರಂಭ
ಮನೆಯೊಳಗೆ ಬಾಲಕಿಯ ಮೃತದೇಹ ಹಾಗೂ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಯುವಕನನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುತ್ತುರಾಜನನ್ನು ರಕ್ಷಿಸಿ ತೂತ್ತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಬತ್ತೈಯಾಪುರಂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


















