ಮೀರತ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮೀರತ್ನ ಕುಖ್ಯಾತ ‘ನೀಲಿ ಡ್ರಮ್ ಕೊಲೆ’ (Blue Drum Murder) ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟವಾಗಿದ್ದು, ಮೃತ ಸೌರಭ್ ರಜಪೂತ್ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ಮೀರತ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಇಬ್ಬರೂ ಅಪರಾಧಿಗಳು ಜೈಲಿನಲ್ಲಿ ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಅವರು ಬುಧವಾರ ಈ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು, ಶಿಕ್ಷೆ ಘೋಷಣೆಯಾವಾಗುತ್ತಿದ್ದಂತೆ ಮುಸ್ಕಾನ್ ಮತ್ತು ಸಾಹಿಲ್ ಭಾರೀ ಕಣ್ಣೀರು ಹಾಕಿದ್ದು, ಯಾರೂ ಸಮಾಧಾನ ಮಾಡಲು ಆಗದಷ್ಟು ಜೋರಾಗಿ ಗೋಳಾಡಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ತೀರ್ಪು ಬಂದಾಗಿನಿಂದಲೂ ಇಬ್ಬರೂ ಯಾವುದೇ ಆಹಾರ ಸೇವಿಸಿಲ್ಲ. ಜೈಲು ಆಡಳಿತ ಮಂಡಳಿಯು ಇವರ ಮೇಲಿನ ಭದ್ರತೆ ಹಾಗೂ ನಿಗಾವನ್ನು ತೀವ್ರಗೊಳಿಸಿದ್ದು, ಪ್ರತ್ಯೇಕ ಸೆಲ್ಗಳಲ್ಲಿ ಇರಿಸಲಾಗಿದೆ. ಕೈದಿಗಳ ಸಂಖ್ಯೆಯನ್ನು ಬದಲಾಯಿಸಲಾಗಿದ್ದು, ಸಾಹಿಲ್ ಶುಕ್ಲಾಗೆ 395 ಹಾಗೂ ಮುಸ್ಕಾನ್ ರಸ್ತೋಗಿಗೆ 396 ಎಂಬ ನಂಬರ್ ನೀಡಲಾಗಿದೆ. ಜೈಲಿನ ನಿಯಮದಂತೆ ಸಾಹಿಲ್ ಬಿಳಿ ಕುರ್ತಾ-ಪೈಜಾಮಾ ಧರಿಸಿದರೆ, ಮುಸ್ಕಾನ್ ಕೆನೆ ಬಣ್ಣದ ಸೀರೆ ಅಥವಾ ಚೂಡಿದಾರ್ ಧರಿಸಲಿದ್ದಾರೆ. ಮುಂದಿನ ಕಾನೂನು ಹೋರಾಟಕ್ಕಾಗಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿರುವುದನ್ನು ಅಧಿಕಾರಿಗಳು ಅವರಿಗೆ ತಿಳಿಸಿದ್ದಾರೆ.
ಮಹಾಭಾರತದ ಉಲ್ಲೇಖ, ಭಗವದ್ಗೀತೆಯ ಸಾರ
ಪ್ರಕರಣದ ವಿಚಾರಣೆಯು ಒಟ್ಟು 126 ದಿನಗಳ ಕಾಲ ನಡೆದಿದ್ದು, 22 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯವು ಭಗವದ್ಗೀತೆ ಹಾಗೂ ಮಹಾಭಾರತದ ಉಲ್ಲೇಖಗಳನ್ನು ಬಳಸಿಕೊಂಡಿತು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದೇ ಧರ್ಮ ಎಂಬ ತತ್ವದಡಿ ಈ ತೀರ್ಪು ನೀಡಲಾಗಿದೆ ಎಂದು ಸಂತ್ರಸ್ತ ಸೌರಭ್ ಪರ ವಕೀಲರು ತಿಳಿಸಿದ್ದಾರೆ. ವಿಶೇಷವೆಂದರೆ, ಮುಸ್ಕಾನ್ ಅವರ ಹೆತ್ತವರೇ ನ್ಯಾಯಾಲಯದ ಮುಂದೆ ಹಾಜರಾಗಿ, ಸೌರಭ್ ಅತ್ಯಂತ ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದ್ದು, ತಮ್ಮ ಮಗಳಿಗೆ ಮರಣದಂಡನೆ ನೀಡಿದರೂ ನಾವು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜೈಲಿನಲ್ಲಿರುವ ಮುಸ್ಕಾನ್ ಅವರನ್ನು ಭೇಟಿಯಾಗಲು ಅವರ ಕುಟುಂಬದ ಯಾರೂ ಕೂಡ ಬಂದಿರಲಿಲ್ಲ.
ಏನಿದು ಪ್ರಕರಣ?
ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನು 2025ರ ಮಾರ್ಚ್ 3ರಂದು ಮೀರತ್ನ ಇಂದಿರಾನಗರದಲ್ಲಿರುವ ಅವರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಮುಸ್ಕಾನ್ ತನ್ನ ಪತಿಯ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅರಿವಿಲ್ಲದಂತೆ ಮಾಡಿದ್ದಳು. ನಂತರ ಅಲ್ಲಿಗೆ ಬಂದ ಸಾಹಿಲ್ ಜತೆ ಸೇರಿ ಸೌರಭ್ ಅವರನ್ನು ಇರಿದು ಹತ್ಯೆ ಮಾಡಿದ್ದಳು. ಬಳಿಕ ಮೃತದೇಹವನ್ನು ತುಂಡರಿಸಿ, ನೀಲಿ ಬಣ್ಣದ ದೊಡ್ಡ ಡ್ರಮ್ನಲ್ಲಿ ಹಾಕಿದ್ದಳು. ನಂತರ ಅದರೊಳಗೆ ಮರಳು, ನೀರು ಹಾಗೂ ಸಿಮೆಂಟ್ ಬೆರೆಸಿ ಸುರಿದಿದ್ದರು. ಮರುದಿನವೇ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಸೌರಭ್ ಬದುಕಿದ್ದಾರೆ ಹಾಗೂ ಕೆಲಸದ ನಿಮಿತ್ತ ಹೊರಟಿದ್ದಾರೆ ಎಂದು ಬಿಂಬಿಸಲು ಅವರ ಮೊಬೈಲ್ನಿಂದ ಕುಟುಂಬಸ್ಥರಿಗೆ ಸಂದೇಶ ಕಳುಹಿಸುತ್ತಿದ್ದರು.
ಮಾರ್ಚ್ 17ರಂದು ದಂಪತಿಯ ಆರು ವರ್ಷದ ಮಗುವೊಂದು ಸ್ಥಳೀಯರ ಬಳಿ “ಅಪ್ಪ ಡ್ರಮ್ನಲ್ಲಿದ್ದಾರೆ” ಎಂದು ಮುಗ್ಧವಾಗಿ ಹೇಳಿದ ನಂತರ ಬಾಂಧವರು ಪೊಲೀಸರೊಂದಿಗೆ ಮನೆಗೆ ಧಾವಿಸಿದ್ದರು. ಡ್ರಮ್ ಅನ್ನು ಕತ್ತರಿಸಿ ನೋಡಿದಾಗ ಸೌರಭ್ ಅವರ ಕೊಳೆತ ಮೃತದೇಹ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಎರಡು ದಿನಗಳ ಬಳಿಕ ಇಬ್ಬರನ್ನೂ ಬಂಧಿಸಿದ್ದರು. ಸದ್ಯ ಸೆಷನ್ಸ್ ನ್ಯಾಯಾಲಯ ನೀಡಿರುವ ಈ ಮರಣದಂಡನೆ ಶಿಕ್ಷೆಯು ಜಾರಿಗೆ ಬರಬೇಕಾದರೆ ಹೈಕೋರ್ಟ್ನಿಂದ ಅನುಮೋದನೆಗೊಳ್ಳಬೇಕಿದೆ.


















