ಬೆಂಗಳೂರು: ಭಾರತೀಯ ಕ್ರಿಕೆಟ್ನ ದಿಗ್ಗಜರಾದ ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಜೋಡಿ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಮತ್ತೆ ಒಂದಾಗಿದೆ. ಮುಂಬರುವ 2027ರ ಐಪಿಎಲ್ ಟೂರ್ನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿರುವ ಸೌರವ್ ಗಂಗೂಲಿ ಅವರೊಂದಿಗೆ ಯುವರಾಜ್ ಸಿಂಗ್ ಮತ್ತೊಮ್ಮೆ ಕೆಲಸ ಮಾಡಲಿದ್ದಾರೆ. ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವಾಗ ಯುವರಾಜ್ ಸಿಂಗ್ ನೀಡಿದ ಹಾಸ್ಯಭರಿತ ಪ್ರತಿಕ್ರಿಯೆ ಇದೀಗ ಕ್ರೀಡಾ ವಲಯದಲ್ಲಿ ಹಾಗೂ ಅಭಿಮಾನಿಗಳ ನಡುವೆ ಭಾರಿ ಚರ್ಚೆಯಾಗುತ್ತಿದೆ.
ದಾದಾ-ಯುವಿ ಮತ್ತೆ ಒಂದಾದರು
ಭಾರತೀಯ ಕ್ರಿಕೆಟ್ನಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿಯೇ ಯುವರಾಜ್ ಸಿಂಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿ, ದೈತ್ಯ ಪ್ರತಿಭೆಯಾಗಿ ಬೆಳೆದು ನಿಂತವರು. ಇದೀಗ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿರುವ ಗಂಗೂಲಿ, ಯುವರಾಜ್ ಸಿಂಗ್ ಅವರಿಗೆ ಸಹಾಯಕ ಕೋಚ್ ಆಗುವಂತೆ ಕೇಳಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, “ದಾದಾ ನನಗೆ ತಮ್ಮ ಸಹಾಯಕ ಕೋಚ್ ಆಗುವಂತೆ ಕೇಳಿದಾಗ, ಕಳೆದ 25 ವರ್ಷಗಳಿಂದ ನಾನು ನಿಮ್ಮ ಸಹಾಯಕನಾಗಿಯೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಬಹುಶಃಅದೇಕೆಲಸವನ್ನು ಈಗಲೂ ಮುಂದುವರಿಸಲಿದ್ದೇನೆ ಎಂದು ತಮಾಷೆಯಾಗಿ ಉತ್ತರಿಸಿದ್ದೆ” ಎಂದು ಹೇಳಿದ್ದಾರೆ. ಸೌರವ್ ಗಂಗೂಲಿ ಅವರನ್ನು ತಮ್ಮ ಹಿರಿಯ ಅಣ್ಣನಂತೆ ಕಾಣುವ ಯುವರಾಜ್ ಸಿಂಗ್, ತಂಡದ ಆಯ್ಕೆ, ಮಾನಸಿಕ ಸ್ಥೈರ್ಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಗಂಗೂಲಿ ಅವರಿಂದ ಸಾಕಷ್ಟು ಕಲಿತಿರುವುದಾಗಿ ಸ್ಮರಿಸಿಕೊಂಡಿದ್ದಾರೆ. ದಾದಾ ಅವರ ಜೊತೆ ಕೋಚ್ ಆಗಿ ಕೆಲಸಮಾಡಲುಅತ್ಯಂತಉತ್ಸುಕನಾಗಿದ್ದೇನೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ಚೊಚ್ಚಲ ಐಪಿಎಲ್ ಟ್ರೋಫಿಯ ಗುರಿ
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. 2020ರಲ್ಲಿ ಫೈನಲ್ ತಲುಪಿದ್ದೇ ಆ ತಂಡದ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಪ್ಲೇ-ಆಫ್ ಪ್ರವೇಶಿಸುವಲ್ಲಿಯೂ ತಂಡ ವಿಫಲವಾಗಿತ್ತು. ಇದೀಗ ಗಂಗೂಲಿ ಮತ್ತು ಯುವರಾಜ್ ಸಿಂಗ್ ಜೋಡಿಯು ಈ ಕೊರತೆಯನ್ನು ನೀಗಿಸುವ ಬಲವಾದ ಗುರಿ ಹೊಂದಿದೆ. ತಮ್ಮ ಆಟದ ದಿನಗಳಲ್ಲಿ ಭಾರತೀಯ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ್ದ ಈ ಇಬ್ಬರು ದಿಗ್ಗಜರು, ಇದೀಗ ಕೋಚಿಂಗ್ ವಿಭಾಗದಲ್ಲಿಯೂ ಅದೇ ರೀತಿಯ ಮ್ಯಾಜಿಕ್ ಮಾಡುವ ನಿರೀಕ್ಷೆಯಿದೆ. ತಂಡದ ಡ್ರೆಸ್ಸಿಂಗ್ ರೂಮ್ನಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸುವಲ್ಲಿ ಹಾಗೂ ಆಟಗಾರರಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಗಂಗೂಲಿ ಅವರ ನಾಯಕತ್ವದ ಗುಣಗಳು ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿವೆ ಎಂದು ಯುವರಾಜ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಸಿಂಗ್ ಅವರ ತರಬೇತಿ ಅನುಭವ
ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗಿನ ಒಡನಾಟ ಯುವರಾಜ್ ಸಿಂಗ್ ಅವರಿಗೆ ಹೊಸದಲ್ಲ. 2015ರಲ್ಲಿ ಅಂದಿನ ಡೆಲ್ಲಿ ಡೇರ್ಡೆವಿಲ್ಸ್ ತಂಡವು ದಾಖಲೆಯ 16 ಕೋಟಿ ರೂಪಾಯಿ ನೀಡಿ ಯುವರಾಜ್ ಅವರನ್ನು ಖರೀದಿಸಿತ್ತು. ಆ ಆವೃತ್ತಿಯಲ್ಲಿ ಯುವಿ ಎಲ್ಲಾ 14 ಪಂದ್ಯಗಳನ್ನು ಆಡಿದ್ದರು. ಇದೀಗ 11 ವರ್ಷಗಳ ಬಳಿಕ ಸಂಪೂರ್ಣ ಭಿನ್ನವಾದ ಪಾತ್ರದಲ್ಲಿ ಅವರು ಫ್ರಾಂಚೈಸಿಗೆ ಮರಳಿದ್ದಾರೆ. ಅಧಿಕೃತವಾಗಿ ಯುವರಾಜ್ ಸಿಂಗ್ ಅವರಿಗೆ ಇದು ಮೊದಲ ಕೋಚಿಂಗ್ ಜವಾಬ್ದಾರಿಯಾಗಿದ್ದರೂ, ತೆರೆಯ ಹಿಂದೆ ಅವರು ಈಗಾಗಲೇ ಹಲವು ಯುವ ಆಟಗಾರರಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ.
ಭಾರತ ತಂಡದ ಪ್ರಮುಖ ಆಟಗಾರರಾದ ಶುಭಮನ್ ಗಿಲ್, ಟಿ20 ಸ್ಟಾರ್ ಅಭಿಷೇಕ್ ಶರ್ಮಾ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರಂತಹ ಪ್ರತಿಭೆಗಳನ್ನು ಬೆಳೆಸುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲದೆ, ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಕೂಡ ತಮ್ಮ ಕಳಪೆ ಫಾರ್ಮ್ನಲ್ಲಿದ್ದಾಗ ಯುವರಾಜ್ ಸಿಂಗ್ ಅವರ ಸಲಹೆ ಪಡೆದುಕೊಂಡಿದ್ದರು. ಯುವ ಆಟಗಾರರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿರುವ ಯುವರಾಜ್ ಸಿಂಗ್ ಅವರ ಮಾರ್ಗದರ್ಶನ ಹಾಗೂ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ ಅವರ ಗೆಲುವಿನ ಮನಸ್ಥಿತಿಯು ಮುಂಬರುವ ಐಪಿಎಲ್ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಹುದೊಡ್ಡ ಆಸ್ತಿಯಾಗಲಿದೆ.
ಇದನ್ನೂ ಓದಿ:ಹೈದರಾಬಾದ್ ಪಂದ್ಯದ ಬಿಡುವಿನಲ್ಲಿ ಪೇರಲೆ ಹಣ್ಣು ಸವಿದು ಗಮನ ಸೆಳೆದ ವಿಂಡೀಸ್ ಕೋಚ್ ಡ್ಯಾರೆನ್ ಸಾಮಿ!



















