ಕೊಲಂಬೊ: ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರವಾಗಿ ಮಾಡಿದ ಕಾಮೆಂಟ್ವೊಂದು ಶ್ರೀಲಂಕಾದ 24 ವರ್ಷದ ಹಿಂದೂ ವಲಸೆ ಕಾರ್ಮಿಕನನ್ನು ಮರಣದಂಡನೆಯ ಸಂಕಷ್ಟಕ್ಕೆ ಸಿಲುಕಿಸಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಶಿವರಸ ಅಣೋಜನ್ಗೆ ಆರಂಭದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಮೇಲ್ಮನವಿ ಪ್ರಕ್ರಿಯೆಯಲ್ಲಿ ಶಿಕ್ಷೆಯನ್ನು ಮರಣದಂಡನೆಗೆ ಏರಿಸಲಾಗಿದೆ ಎಂದು ವರದಿಯಾಗಿದೆ. ಮಗನನ್ನು ಕ್ಷಮಿಸಿ ಮನೆಗೆ ಕಳುಹಿಸುವಂತೆ ತಾಯಿ ಕಣ್ಣೀರಿನ ಮನವಿ ಮಾಡಿದ್ದು, ಶ್ರೀಲಂಕಾ ಸರ್ಕಾರವೂ ರಾಜತಾಂತ್ರಿಕ ಮತ್ತು ಕಾನೂನು ಮಾರ್ಗಗಳ ಮೂಲಕ ನೆರವಿಗೆ ಮುಂದಾಗಿದೆ.
ಶ್ರೀಲಂಕಾದ ಕಲ್ಮುನೈ ಮೂಲದ ಶಿವರಸ ಅಣೋಜನ್ ಸೌದಿ ಅರೇಬಿಯಾದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಜೂನ್ ತಿಂಗಳ ಕೊನೆಯಲ್ಲಿ ಶ್ರೀಲಂಕಾದಲ್ಲಿ ನಡೆದ ಧಾರ್ಮಿಕ ಯಾತ್ರೆಯೊಂದರ ಸಂದರ್ಭದಲ್ಲಿ ನಾಯಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರಿಂದ ವಿವಿಧ ಧರ್ಮಗಳ ಅನುಯಾಯಿಗಳ ನಡುವೆ ಆನ್ಲೈನ್ನಲ್ಲಿ ವಾಗ್ವಾದ ಆರಂಭವಾಗಿತ್ತು.
ಈ ವಾಗ್ವಾದದ ವೇಳೆ ಹಿಂದೂ ದೇವತೆಯ ಕುರಿತು ಅವಹೇಳನಕಾರಿ ಹೇಳಿಕೆಯೊಂದು ಪ್ರಕಟವಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಣೋಜನ್ ತಮಿಳಿನಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದರು ಎಂದು ವರದಿಯಾಗಿದೆ. ಬಳಿಕ ಅವರು ಆ ಕಾಮೆಂಟ್ ಅಳಿಸಿ ಕ್ಷಮೆಯಾಚನೆಯ ವಿಡಿಯೊವನ್ನೂ ಪ್ರಕಟಿಸಿದ್ದರು. ಆದರೆ ಅಷ್ಟರಲ್ಲಾಗಲೇ ಮೂಲ ಕಾಮೆಂಟ್ನ ಚಿತ್ರಪ್ರತಿ ಸಂಗ್ರಹವಾಗಿತ್ತು.ಶ್ರೀಲಂಕಾದಲ್ಲಿದ್ದ ಕೆಲವರು ಅಣೋಜನ್ ಕೆಲಸ ಮಾಡುತ್ತಿದ್ದ ಕಂಪನಿಗೆ ಇಮೇಲ್ ಮೂಲಕ ಈ ವಿಚಾರ ತಿಳಿಸಿದ್ದರು ಎಂದು ಅವರ ಸಹೋದರ ಹಮ್ಸಿದಾನ್ ಹೇಳಿದ್ದಾರೆ. ಬಳಿಕ ಕಂಪನಿಯು ಸೌದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಅವರ ವೈಯಕ್ತಿಕ ಸಾಧನಗಳನ್ನು ವಶಪಡಿಸಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಐದು ವರ್ಷಗಳ ಶಿಕ್ಷೆ ಮರಣದಂಡನೆಯಾಗಿದ್ದು ಹೇಗೆ?
ಅಲ್-ಅಹ್ಸಾ ಕ್ರಿಮಿನಲ್ ನ್ಯಾಯಾಲಯವು ಜುಲೈ 15ರಂದು ಅಣೋಜನ್ಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಮೂರು ಮಿಲಿಯನ್ ಸೌದಿ ರಿಯಾಲ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಸುಮಾರು ಎಂಟು ಲಕ್ಷ ಅಮೆರಿಕನ್ ಡಾಲರ್ಗೆ ಸಮಾನವಾಗಿದೆ ಎಂದು ವರದಿಯಾಗಿದೆ.
ಶಿಕ್ಷೆಯನ್ನು ಕಡಿಮೆ ಮಾಡುವಂತೆ ಅಣೋಜನ್ ಪರವಾಗಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಅದು ತಿರಸ್ಕೃತಗೊಂಡಿತ್ತು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ವಿಜಯಿತ ಹೆರತ್ ಅವರನ್ನು ಉಲ್ಲೇಖಿಸಿ ‘ತಮಿಳ್ ಗಾರ್ಡಿಯನ್’ ವರದಿ ಮಾಡಿದೆ. ಬಳಿಕ ಸೌದಿ ಅಭಿಯೋಜಕರು ಸೈಬರ್ ಅಪರಾಧ ಕಾನೂನಿನ ಬದಲಿಗೆ ಷರಿಯಾ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ಪರಿಗಣಿಸುವಂತೆ ಮೇಲ್ಮನವಿ ಸಲ್ಲಿಸಿದ್ದರು.
ಸೆಪ್ಟೆಂಬರ್ 17ರಂದು ಮೇಲ್ಮನವಿ ನ್ಯಾಯಾಲಯವು ಅಭಿಯೋಜಕರ ಮನವಿಯನ್ನು ಅಂಗೀಕರಿಸಿ ಶಿಕ್ಷೆಯನ್ನು ಮರಣದಂಡನೆಗೆ ಏರಿಸಿತು ಎಂದು ಬಿಬಿಸಿ ವರದಿ ಮಾಡಿದೆ. ಈ ಬೆಳವಣಿಗೆಯು ಅಣೋಜನ್ ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದೆ.
ಮಗನನ್ನು ಕ್ಷಮಿಸುವಂತೆ ತಾಯಿಯ ಮನವಿ
ಅಣೋಜನ್ ಅವರ ತಾಯಿ ರಸಮಾನಿಕ್ಕಂ ಯೋಗಲಕ್ಷ್ಮಿ ಮಗನ ಬಿಡುಗಡೆಗಾಗಿ ಕರುಣೆ ತೋರುವಂತೆ ಮನವಿ ಮಾಡಿದ್ದಾರೆ. “ನನ್ನ ಮಗ ಮಾಡಿದ ತಪ್ಪುಗಳನ್ನು ಕ್ಷಮಿಸಿ, ಅವನನ್ನು ನಮ್ಮ ಬಳಿಗೆ ಮರಳಲು ಅವಕಾಶ ಮಾಡಿಕೊಡಿ” ಎಂದು ಅವರು ಬಿಬಿಸಿಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 28ರಿಂದ ಮಗನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಕುಟುಂಬ ಆತಂಕ ವ್ಯಕ್ತಪಡಿಸಿದೆ.ಕುಟುಂಬವು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕ ಅವರನ್ನು ಸೆಪ್ಟೆಂಬರ್ 21ರಂದು ಭೇಟಿಯಾಗಿ ನೆರವು ಕೋರಿತ್ತು. ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕ್ಷಮಾದಾನ ಪಡೆಯಲು ಎಲ್ಲ ಪ್ರಯತ್ನ ಮಾಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದರು ಎಂದು ವರದಿಯಾಗಿದೆ.
ಕಾನೂನು ನೆರವಿಗೆ ಮುಂದಾದ ಶ್ರೀಲಂಕಾ ಸರ್ಕಾರ
ಅಣೋಜನ್ ಪರವಾಗಿ ಕ್ಷಮಾದಾನ ಕೋರಲು ತಮಿಳು ಮತ್ತು ಮುಸ್ಲಿಂ ಸಮುದಾಯಗಳ ಹಲವು ಸಂಸದರು ಸೌದಿ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ. ಬೌದ್ಧ ಹಾಗೂ ಹಿಂದೂ ಧಾರ್ಮಿಕ ಮುಖಂಡರೂ ಶ್ರೀಲಂಕಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ತಕ್ಷಣ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಸಹಿ ಸಂಗ್ರಹ, ಪ್ರಾರ್ಥನೆ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆದಿವೆ ಎಂದು ವರದಿಯಾಗಿದೆ.ಇದಲ್ಲದೆ, ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ನಲ್ಲಿ ಮುಂದಿನ ಮೇಲ್ಮನವಿ ಸಲ್ಲಿಸುವ ಸಂಬಂಧ ನಾಲ್ವರು ಸದಸ್ಯರ ಕಾನೂನು ತಂಡವನ್ನು ಕಳುಹಿಸಲು ಶ್ರೀಲಂಕಾ ಸರ್ಕಾರ ಮುಂದಾಗಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಅಜಾರ್ಡ್ ನವಾವಿ ನೇತೃತ್ವದ ತಂಡವು ಪ್ರಕರಣದ ದಾಖಲೆಗಳನ್ನು ಅಂತಿಮಗೊಳಿಸಿ ಸೌದಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಕಾನೂನು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಅಭಿವ್ಯಕ್ತಿ ಮತ್ತು ಧರ್ಮನಿಂದನೆಗೆ ಸಂಬಂಧಿಸಿದ ಕಠಿಣ ಶಿಕ್ಷೆಗಳ ಕುರಿತು ಈ ಪ್ರಕರಣ ಮತ್ತೆ ಚರ್ಚೆ ಹುಟ್ಟುಹಾಕಿದೆ. ಸದ್ಯ ಅಣೋಜನ್ ಕುಟುಂಬವು ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ರಾಜತಾಂತ್ರಿಕ ಪ್ರಯತ್ನಗಳ ಫಲಿತಾಂಶಕ್ಕಾಗಿ ಕಾಯುತ್ತಿದೆ. ಮಗ ಸುರಕ್ಷಿತವಾಗಿ ಮನೆಗೆ ಮರಳಲಿ ಎಂಬ ತಾಯಿಯ ಮನವಿಯೇ ಈಗ ಕುಟುಂಬದ ಏಕೈಕ ಆಶಯವಾಗಿದೆ.
ಇದನ್ನೂ ಓದಿ :ಪಾಕಿಸ್ತಾನದ ನಕ್ಷೆ ಬದಲಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಪ್ಲಾನ್?


















