ಟೆಲ್ ಅವೀವ್: ಕಳೆದ ವಾರ ದುಬೈನಿಂದ ಇಸ್ರೇಲ್ ರಾಜಧಾನಿ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದೊಳಗೆ ನಡೆದ ಹೈಜಾಕ್ ಮಾದರಿಯ ಸನ್ನಿವೇಶಕ್ಕೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ವಿಚಾರ ಇದೀಗ ತಿಳಿದುಬಂದಿದೆ. ದಾಳಿಕೋರ, ಒಮಾನ್ ಮೂಲದ ಸಹ- ಪೈಲಟ್ ಹಮಾಮ್ ಅಲ್-ಹಮ್ಮಾಮಿ ಮುಖ್ಯ ಪೈಲಟ್ ಭಾರತದ ಸ್ಮಿತ್ ಮಚ್ಚಾರ್ ಅವರ ಮೇಲೆ ಕೊಡಲಿಯಿಂದ ದಾಳಿ ನಡೆಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾಗ, ಇಸ್ರೇಲ್ ಸರ್ಕಾರವು ಸುರಕ್ಷತೆಯ ದೃಷ್ಟಿಯಿಂದ ಆ ವಿಮಾನವನ್ನು ಆಕಾಶದಲ್ಲೇ ಹೊಡೆದುರುಳಿಸಲು ಯೋಜನೆ ರೂಪಿಸಿತ್ತು ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಎಚ್ಚೆತ್ತ ಇಸ್ರೇಲ್ ಭದ್ರತಾ ಪಡೆ
ವಿಮಾನವು ಜೋರ್ಡಾನ್ ವಾಯುಪ್ರದೇಶದಲ್ಲಿ ಸಾಗುತ್ತಿದ್ದಾಗ ಸಹ-ಪೈಲಟ್ ಕೃತ್ಯದಿಂದಾಗಿ ವಿಮಾನವು ಕೇವಲ ಕೆಲವೇ ಸೆಕೆಂಡುಗಳಲ್ಲಿ ಸುಮಾರು 18,000 ಅಡಿಗಳಷ್ಟು ಕೆಳಗೆ ಕುಸಿದಿತ್ತು. ತಕ್ಷಣವೇ ಕಂಟ್ರೋಲ್ ರೂಂನಿಂದ ಕಾಕ್ಪಿಟ್ಗೆ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಉತ್ತರ ಬಂದಿರಲಿಲ್ಲ. ವಿಮಾನದಿಂದ ಹೈಜಾಕ್ ಸಂಕೇತ (7500 ಡಿಸ್ಟ್ರೆಸ್ ಕೋಡ್) ರವಾನೆಯಾದ ತಕ್ಷಣ, ಇಸ್ರೇಲ್ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರ ಜಾಗೃತಗೊಂಡಿತು. 9/11 ಮಾದರಿಯ ಉಗ್ರರ ದಾಳಿಯನ್ನು ತಡೆಯಲು ಇರುವ ಶಿಷ್ಟಾಚಾರದ ಪ್ರಕಾರ, ಇಸ್ರೇಲ್ ಪಡೆಗಳು ತಕ್ಷಣವೇ ಯುದ್ಧ ವಿಮಾನಗಳನ್ನು (ಫೈಟರ್ ಜೆಟ್) ಹಾರಿಸಿದವು ಹಾಗೂ ಇಸ್ರೇಲ್ ವಾಯುಪ್ರದೇಶವನ್ನು ಬಂದ್ ಮಾಡಿದವು.
ಪ್ರಧಾನಿ ನೆತನ್ಯಾಹು ಅನುಮತಿಯಷ್ಟೇ ಬಾಕಿ ಇತ್ತು!
ಇಸ್ರೇಲ್ನ ಪ್ರಮುಖ ಕಟ್ಟಡಗಳು ಅಥವಾ ಬೆನ್ ಗುರಿಯನ್ ವಿಮಾನನಿಲ್ದಾಣಕ್ಕೆ ಹೈಜಾಕ್ ವಿಮಾನವನ್ನು ಅಪ್ಪಳಿಸಿ ಸಾವಿರಾರು ಜನರ ಸಾವು-ನೋವಿಗೆ ಕಾರಣವಾಗುವುದನ್ನು ತಡೆಯಲು, ಈ ವಿಮಾನವು ಇಸ್ರೇಲ್ ಗಡಿಗೆ ನಿರ್ದಿಷ್ಟ ದೂರ ಸಮೀಪಿಸುತ್ತಿದ್ದಂತೆಯೇ ಆಕಾಶದಲ್ಲೇ ಹೊಡೆದುರುಳಿಸುವುದು ಇಸ್ರೇಲ್ ಯೋಜನೆಯಾಗಿತ್ತು. ಇಸ್ರೇಲ್ ಪ್ರೋಟೋಕಾಲ್ ಪ್ರಕಾರ ಈ ಅಂತಿಮ ನಿರ್ಧಾರವನ್ನು ದೇಶದ ಪ್ರಧಾನ ಮಂತ್ರಿ ಮಾತ್ರ ತೆಗೆದುಕೊಳ್ಳಬೇಕಿತ್ತು. ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಹೆಚ್ಚಿನವರು ಇಸ್ರೇಲಿಗರೇ ಆಗಿದ್ದರೂ, ದೇಶದ ಭದ್ರತೆಗಾಗಿ ವಿಮಾನವನ್ನು ಧ್ವಂಸಗೊಳಿಸಲು ಇಸ್ರೇಲ್ ಸಂಪೂರ್ಣ ಸಿದ್ಧವಾಗಿತ್ತು.
ಕೊನೇ ಕ್ಷಣದಲ್ಲಿ ದಿಕ್ಕು ಬದಲಾಯಿಸಿದ ವಿಮಾನ
ಇಸ್ರೇಲ್ ಯುದ್ಧ ವಿಮಾನಗಳು ದಾಳಿ ನಡೆಸುವ ಕ್ಷಣದಲ್ಲೇ, ವಿಮಾನವು ಇಸ್ರೇಲ್ ಗಡಿಯತ್ತ ಬರುವ ಬದಲಾಗಿ ಸೌದಿ ಅರೇಬಿಯಾದ ವಾಯುಪ್ರದೇಶದತ್ತ ಮುಖಮಾಡಿತು. ಇನ್ನೊಂದೆಡೆ, ತೀವ್ರ ರಕ್ತಸ್ರಾವದ ನಡುವೆಯೂ ಭಾರತೀಯ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಸಾಹಸದಿಂದ ಕಾಕ್ಪಿಟ್ ಬಾಗಿಲು ತೆರೆದರು. ಒಳನುಗ್ಗಿದ ಇಸ್ರೇಲಿ ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಇತರ ಆಫ್-ಡ್ಯೂಟಿ ಪೈಲಟ್ಗಳು ಸಹ-ಚಾಲಕನನ್ನು ಬಂಧಿಸಿ, ವಿಮಾನವನ್ನು ಸೌದಿಯ ತಬುಕ್ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದರು. ಈ ಮೂಲಕ ಇಸ್ರೇಲ್ನಿಂದ ಕ್ಷಿಪಣಿ ದಾಳಿಗೊಳಗಾಗಿ ಆಕಾಶದಲ್ಲೇ ನುಚ್ಚುನೂರಾಗಬೇಕಿದ್ದ ವಿಮಾನ ಹಾಗೂ ಅದರಲ್ಲಿದ್ದ ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪಾರಾದರು.
ಇದನ್ನೂ ಓದಿ:SIRನಿಂದಾಗಿ ದೇಶದ ನಾಗರಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ : ಮುಂಬೈ ಹೈಕೋರ್ಟ್ ಕಿಡಿ!


















