ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಾಲ್ಯದ ಶಾಲಾ ಸ್ನೇಹಿತ, 81 ವರ್ಷದ ಅಸ್ಗರ್ ಅಲಿ ವೋರಾ ಅವರಿಗೆ ವರ್ಷಗಳಿಂದ ಕಾನೂನು ಸಂಘರ್ಷದಲ್ಲಿದ್ದ ತಮ್ಮ ಸ್ವಂತ ಜಮೀನು ಅಂತಿಮವಾಗಿ ಮರಳಿ ಸಿಕ್ಕಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಮೀರ-ಭಾಯಂದರ್ ಕ್ಷೇತ್ರದ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರು ವಿವಾದಿತ ಜಾಗದ ಮೇಲಿದ್ದ ತಮ್ಮ ಹಕ್ಕನ್ನು ತೆರವುಗೊಳಿಸಿ, ಪೊಲೀಸ್ ದೂರನ್ನು ಹಿಂಪಡೆದಿದ್ದಾರೆ. ಈ ಮೂಲಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ತಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಿದ ಆರೋಪ
ಗುಜರಾತಿನ ವಡ್ನಾಗರದ ಬಿಎನ್ ಶಾಲೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವ್ಯಾಸಂಗ ಮಾಡಿದ್ದ ಅಸ್ಗರ್ ಅಲಿ ವೋರಾ, ಸೆಪ್ಟೆಂಬರ್ 8 ರಂದು ಪ್ರಧಾನಿಯವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. 1989ರಲ್ಲಿ ಭಾಯಂದರ್ ಈಸ್ಟ್‌ನಲ್ಲಿ ಖರೀದಿ ಮಾಡಿದ್ದ ಸುಮಾರು 2,810 ಚದರ ಮೀಟರ್ ಜಾಗವನ್ನು 2011ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮ ಗಮನಕ್ಕೆ ಬಾರದಂತೆ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರಿಗೆ ಸಂಬಂಧಿಸಿರುವ ನಿರ್ಮಾಣ ಸಂಸ್ಥೆಗಳು ಕಬಳಿಸಿವೆ ಎಂದು ಅವರು ದೂರಿದ್ದರು. ಈ ಅಕ್ರಮದ ವಿರುದ್ಧ ಧ್ವನಿಯೆತ್ತಿದ್ದರೂ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದ ವೋರಾ, ಸಿಬಿಐ ತನಿಖೆಗೆ ಆಗ್ರಹಿಸಿದ್ದರು.
ಕೂಡಲೇ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ
ಪ್ರಧಾನಿ ಮೋದಿ ಅವರ ಭೇಟಿಯ ನಂತರ ಮಹಾರಾಷ್ಟ್ರ ಆಡಳಿತ ಯಂತ್ರವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿ ಶ್ರೀಕರ್ ಪರದೇಸಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಅಸ್ಗರ್ ಅಲಿ ವೋರಾ, ಶಾಸಕ ನರೇಂದ್ರ ಮೆಹ್ತಾ ಹಾಗೂ ಮೀರ-ಭಾಯಂದರ್ ಮಹಾನಗರ ಪಾಲಿಕೆಯ ಆಯುಕ್ತರು ಭಾಗವಹಿಸಿದ್ದರು. ಸಭೆಯ ವೇಳೆ ಶಾಸಕ ನರೇಂದ್ರ ಮೆಹ್ತಾ ಅವರು ನಗರ ಯೋಜನಾ ಇಲಾಖೆಗೆ ಪತ್ರ ಸಲ್ಲಿಸಿ, ಆ ಜಾಗದ ನಿರ್ಮಾಣ ಪರವಾನಗಿಯನ್ನು ವಾಪಸ್ ನೀಡುತ್ತಿರುವುದಾಗಿಯೂ ಮತ್ತು ಜಾಗದ ಮೇಲಿನ ಹಕ್ಕನ್ನು ತೆರವುಗೊಳಿಸುವುದಾಗಿಯೂ ಅಧಿಕೃತವಾಗಿ ಘೋಷಿಸಿದರು. ಅಲ್ಲದೆ, ವೋರಾ ವಿರುದ್ಧ ನೀಡಿದ್ದ ದೂರನ್ನೂ ಹಿಂಪಡೆಯುವುದಾಗಿ ಪ್ರಕಟಿಸಿದರು.
ಹೀಗಾಗಿ, ಪ್ರಧಾನಿ ಮೋದಿ ಭೇಟಿಯ ಬೆನ್ನಲ್ಲೇ ಅಲಿ ಅವರಿಗೆ ತಮ್ಮ ಶ್ರಮದ ಭೂಮಿ ಮರಳಿ ಸಿಕ್ಕಿದೆ. ಸ್ನೇಹಿತನ ನೋವಿಗೆ ಸ್ಪಂದಿಸಿದ ಮೋದಿಯವರ ಹೃದಯ ವೈಶಾಲ್ಯತೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 15 ವರ್ಷದ ಸ್ಟಾರ್ ಆಟಗಾರ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಯಾಕೆ ಅವಕಾಶವಿಲ್ಲ?


















