ನವದೆಹಲಿ ; ರಾಜಧಾನಿ ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಕಟ್ಟಡ ಕುಸಿತ ಘಟನೆಗೆ ಕಾರಣವೇನು ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. 50 ವರ್ಷ ಹಳೆಯ ನಾಲ್ಕು ಮಹಡಿಯ ಕಟ್ಟಡ ಧರಾಶಾಹಿಯಾದ ಪರಿಣಾಮ ಆರು ಜನರು ಜೀವ ಕಳೆದುಕೊಂಡಿದ್ದು, ಇನ್ನೂ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ದೊರೆತಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನೆಲಮಳಿಗೆಯಲ್ಲಿ (ಬೇಸ್‌ಮೆಂಟ್) ನಡೆಯುತ್ತಿದ್ದ ರಿಪೇರಿ ಹಾಗೂ ನವೀಕರಣ ಕಾಮಗಾರಿಯೇ ಈ ಭೀಕರ ದುರಂತಕ್ಕೆ ಕಾರಣವಾಗಿದೆ. ಸುಮಾರು ಅರ್ಧ ಶತಮಾನದಷ್ಟು ಹಳೆಯದಾದ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ನೀರು ಶೇಖರಣೆಯಾಗಿತ್ತು. ಇದರ ನಡುವೆಯೇ ರಿಪೇರಿ ಕೆಲಸ ಕೈಗೊಂಡಿದ್ದರಿಂದ, ಪ್ರಧಾನ ಕಂಬವೊಂದು (ಪಿಲ್ಲರ್) ಅಸ್ಥಿರಗೊಂಡು ಏಕಾಏಕಿ ಇಡೀ ಕಟ್ಟಡವೇ ನೆಲಸಮಗೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಶೇ.80ರಷ್ಟು ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ.
6 ಜನರು ಆಸ್ಪತ್ರೆಗೆ ದಾಖಲು
ಇದು ಪಿಜಿ ಕಟ್ಟಡವಾಗಿದ್ದ ಕಾರಣ, ಅಲ್ಲಿದ್ದವರು ಬಹುತೇಕ ಮಂದಿ ವಿದ್ಯಾರ್ಥಿಗಳೇ ಆಗಿದ್ದರು. ದುರಂತದಲ್ಲಿ ಗಾಯಗೊಂಡ ಆರು ಜನರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರ ಕುಟುಂಬಸ್ಥರೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿಗಳಿಗೆ ಪರ್ಯಾಯ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಪರಿಸ್ಥಿತಿ ಬಗ್ಗೆ ನಿಗಾವಹಿಸುತ್ತಿದ್ದು, ಪ್ರಧಾನ ಮಂತ್ರಿಗಳ ಮಾರ್ಗದರ್ಶನದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅಕ್ಕಪಕ್ಕದ ಅಪಾಯಕಾರಿ ಕಟ್ಟಡಗಳ ತೆರವು
ದುರಂತ ಸಂಭವಿಸಿದ ಸತ್ಯನಿಕೇತನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಮಹಡಿಗಳನ್ನು ಹೊಂದಿರುವ ಕಟ್ಟಡಗಳನ್ನು ತಕ್ಷಣವೇ ಸೀಲ್ ಮಾಡಲು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಕುಸಿದ ಕಟ್ಟಡಕ್ಕೆ ಹೊಂದಿಕೊಂಡಿರುವ ಮತ್ತೊಂದು 40-50 ವರ್ಷ ಹಳೆಯ ಕಟ್ಟಡವೂ ಅಸ್ಥಿರಗೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಅದನ್ನು ಈಗಾಗಲೇ ಖಾಲಿ ಮಾಡಿಸಲಾಗಿದೆ. ಘಟನಾ ಸ್ಥಳದಲ್ಲಿ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಿದ ಬಳಿಕ ಆ ಕಟ್ಟಡವನ್ನೂ ಧ್ವಂಸಗೊಳಿಸಲಾಗುವುದು ಎಂದು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಘಟನೆಯ ತೀವ್ರತೆಯನ್ನು ಪರಿಗಣಿಸಿರುವ ದೆಹಲಿ ಮಹಾನಗರ ಪಾಲಿಕೆ (MCD), ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸೆಕ್ಷನ್ 348 ರ ಅಡಿಯಲ್ಲಿ ಸತ್ಯನಿಕೇತನದ ಮನೆ ಸಂಖ್ಯೆ 13 ಕ್ಕೆ ಅಧಿಕೃತವಾಗಿ ನೆಲಸಮಗೊಳಿಸುವ (ಡೆಮಾಲಿಷನ್) ನೋಟಿಸ್ ನೀಡಿದೆ. ಮೂರು ದಿನಗಳ ಒಳಗಾಗಿ ಕಟ್ಟಡ ತೆರವುಗೊಳಿಸದಿದ್ದರೆ ಪಾಲಿಕೆಯೇ ತೆರವುಗೊಳಿಸಿ ಅದರ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡುವುದಾಗಿ ಎಚ್ಚರಿಸಿದೆ.
ಇನ್ನು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಸಫ್ದರ್‌ಜಂಗ್ ಆಸ್ಪತ್ರೆ, ಧೌಲಾ ಕುವಾನ್ ಹಾಗೂ ಬೆನಿಟೊ ಜೌರೆಜ್ ಮಾರ್ಗಗಳಲ್ಲಿ ದೆಹಲಿ ಸಂಚಾರ ಪೊಲೀಸರು ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಡಿಸಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ಮನವಿ ಮಾಡಿದ್ದಾರೆ.
ಈ ಭೀಕರ ದುರಂತದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ನಿರ್ಲಕ್ಷ್ಯ ವಹಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ-ಮಗ!

















