ಬೆಂಗಳೂರು: ದಸರಾ ಹಾಗೂ ದೀಪಾವಳಿಗೆ ಸ್ಮಾರ್ಟ್ ಫೋನ್ ಖರೀದಿಸಬೇಕು ಎಂಬ ಚಿಂತನೆಯಲ್ಲಿದ್ದೀರಾ? ಹಾಗಾದರೆ, ನೀವೊಂದಿಷ್ಟು ದಿನ ಕಾಯುವುದು ಒಳಿತು. ಭಾರತದಲ್ಲಿ ಸ್ಮಾರ್ಟ್ ಫೋನ್ ಪ್ರಿಯರಿಗೆ ಮತ್ತು ಶೀಘ್ರದಲ್ಲೇ ಹೊಸ ಫೋನ್ ಖರೀದಿಸಲು ಬಯಸುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 12ರಂದು ನಡೆಯುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಸ್ಮಾರ್ಟ್ ಫೋನ್ ಮೇಲಿನ ಜಿಎಸ್ ಟಿಯನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭಾರತದಲ್ಲಿ ಕುಸಿಯುತ್ತಿರುವ ಸ್ಮಾರ್ಟ್ ಫೋನ್ ಮಾರಾಟವನ್ನು ಹೆಚ್ಚಿಸಲು ಜಿಎಸ್ ಟಿ ಕೌನ್ಸಿಲ್ ಸ್ಮಾರ್ಟ್ ಫೋನ್ಗಳ ಮೇಲಿನ ಜಿಎಸ್ ಟಿ ದರವನ್ನು ಶೇ.18 ರಿಂದ ಶೇ.5 ಕ್ಕೆ ಇಳಿಸುವ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ದಸರಾ, ದೀಪಾವಳಿ ಸಂದರ್ಭದಲ್ಲಿ ಕಂಪನಿಗಳು ಭಾರಿ ಡಿಸ್ಕೌಂಟ್ ನೀಡುತ್ತವೆ. ಇದೇ ವೇಳೆ ಜಿಎಸ್ ಟಿಯೂ ಇಳಿಕೆಯಾದರೆ ಜನ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗಲಿದೆ.
ವಿಶೇಷವಾಗಿ 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿವರೆಗಿನ ಬಜೆಟ್ ಮತ್ತು ಮಿಡ್-ರೇಂಜ್ ಸ್ಮಾರ್ಟ್ ಫೋನ್ ಗಳ ವಿಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಾರಾಟ ಕುಸಿದಿದೆ. ಬಿಡಿಭಾಗಗಳ ವೆಚ್ಚ ಹೆಚ್ಚಿರುವುದರಿಂದ ಮೊಬೈಲ್ ಬೆಲೆಗಳು ಏರಿಕೆಯಾಗಿದ್ದವು. ಜಿಎಸ್ ಟಿ ದರವನ್ನು ಶೇ. 13 ರಷ್ಟು ಕಡಿತಗೊಳಿಸುವುದರಿಂದ ಗ್ರಾಹಕರಿಗೆ ನೆರವಾಗಲಿದೆ. ಉದಾಹರಣೆಗೆ, 15 ಸಾವಿರ ರೂಪಾಯಿ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸಿದರೆ, ಗ್ರಾಹಕರಿಗೆ 1 ಸಾವಿರ ರೂ. ಉಳಿಯಲಿದೆ ಎಂದು ಅಂದಾಜಿಸಲಾಗಿದೆ.
ಹಬ್ಬದ ಸೀಸನ್ ಡಿಸ್ಕೌಂಟ್ ಮಾರಾಟಕ್ಕೂ ಮುನ್ನ ಈ ಪ್ರಸ್ತಾವನೆ ಜಾರಿಗೆ ಬಂದರೆ, ಸಣ್ಣ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಭಾರಿ ಅನುಕೂಲವಾಗಲಿದೆ. ಭಾರತೀಯ ಮೊಬೈಲ್ ತಯಾರಿಕಾ ಕ್ಷೇತ್ರಕ್ಕೂ ಇದು ಹೊಸ ಉತ್ತೇಜನ ನೀಡಲಿದೆ. ಹಾಗೆಯೇ, ಹೊಸ ಫೋನ್ ಖರೀದಿಸಲು ಕಾಯುತ್ತಿರುವವರಿಗೆ ದೊಡ್ಡ ರಿಲೀಫ್ ನೀಡಲಿದೆ. ಯಾವುದಕ್ಕೂ ಅಂತಿಮ ತೀರ್ಮಾನ ತಿಳಿಯಲು ಸೆ.12ರವರೆಗೆ ಕಾಯಬೇಕಿದೆ.


















