ಕರಾಚಿ : ಗಣೇಶ ಚತುರ್ಥಿ ಹಬ್ಬಕ್ಕೆ ವಿಶ್ವದೆಲ್ಲೆಡೆ ಭರದ ಸಿದ್ಧತೆಗಳು ನಡೆದಿವೆ. ಮನೆಗಳು, ದೇವಾಲಯಗಳು ಹಾಗೂ ಸಾರ್ವಜನಿಕ ಪೆಂಡಾಲ್‌ಗಳಲ್ಲಿ ವಿಘ್ನನಿವಾರಕ ಗಣಪತಿ ಬಪ್ಪನನ್ನು ಸ್ವಾಗತಿಸಲು ಭಕ್ತಾದಿಗಳು ಸಜ್ಜಾಗಿದ್ದಾರೆ. ಈ ಹಬ್ಬದ ಸಂಭ್ರಮದ ನಡುವೆಯೇ ಗಡಿ ದಾಟಿ ಬಂದಿರುವ ಒಂದು ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿ ನುಡಿದಿದೆ. ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿರುವ ಮರಾಠಿ ಕುಟುಂಬವೊಂದರ ಗಣೇಶೋತ್ಸವದ ಸಿದ್ಧತೆಗಾಗಿ ಮುಸ್ಲಿಂ ಕಲಾವಿದನೊಬ್ಬ ಶ್ರದ್ಧೆಯಿಂದ ಗಣಪತಿ ಮೂರ್ತಿಗೆ ಬಣ್ಣ ಬಳಿಯುತ್ತಿರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗಣೇಶ್ ಮಠ ಮಂದಿರದಲ್ಲಿ ಮೂಡಿದ ಕಲಾಕೃತಿ
ಕರಾಚಿಯಲ್ಲಿ ವಾಸಿಸುತ್ತಿರುವ ಹಾಗೂ ನಿಯಮಿತವಾಗಿ ಅಲ್ಲಿನ ತಮ್ಮ ಜೀವನದ ತುಣುಕುಗಳನ್ನು ಹಂಚಿಕೊಳ್ಳುವ ಅಮರ್ ಪ್ರಕಾಶ್ ಎಂಬುವವರು ಈ ಸುಂದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕರಾಚಿಯಲ್ಲಿ ಮರಾಠಿ ಕುಟುಂಬವೊಂದು ನಿರ್ವಹಿಸುತ್ತಿರುವ ಪ್ರಸಿದ್ಧ ‘ಗಣೇಶ್ ಮಠ ಮಂದಿರ’ದಲ್ಲಿ ನಡೆದ ಸನ್ನಿವೇಶದ ವಿಡಿಯೋವಿದು. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮುಸ್ಲಿಂ ಧಾರ್ಮಿಕ ಟೋಪಿ (ಸ್ಕಲ್ ಕ್ಯಾಪ್) ಧರಿಸಿದ ಕಲಾವಿದನೊಬ್ಬ ಮೊದಲು ಬಿಳಿ ಬಣ್ಣದ ಗಣೇಶನ ವಿಗ್ರಹಕ್ಕೆ ಸ್ಪ್ರೇ ಪೇಂಟ್ ಮೂಲಕ ಆಧಾರ ಬಣ್ಣಗಳನ್ನು ಬಳಿದು, ನಂತರ ಕುಂಚದ ಸಹಾಯದಿಂದ ಅತ್ಯಂತ ಸೂಕ್ಷ್ಮವಾಗಿ ಬಣ್ಣ ಬಳಿಯುತ್ತಿರುವುದನ್ನು ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ಬಣ್ಣಗಳ ಮೆರುಗಿನೊಂದಿಗೆ ಗಣೇಶನ ಮೂರ್ತಿಗೆ ಜೀವತುಂಬುವ ಈ ಕಲಾತ್ಮಕ ಹಂತಗಳು ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿವೆ.
“ಕೌನ್ ಹಿಂದೂ? ಕೌನ್ ಮುಸ್ಲಿಂ?” ಸೌಹಾರ್ದತೆಯ ಸಂದೇಶ
“ಕರಾಚಿಯ ಗಣೇಶ್ ಮಠ ಮಂದಿರದಲ್ಲಿ ಮರಾಠಿ ಕುಟುಂಬದ ಗಣಪತಿಗೆ ಬಣ್ಣ ಬಳಿಯುತ್ತಿರುವ ಮುಸ್ಲಿಂ ಕಲಾವಿದ” ಎಂಬ ಅಡಿಬರಹದೊಂದಿಗೆ ಹಂಚಿಕೊಳ್ಳಲಾದ ಈ ವಿಡಿಯೋದ ಮೇಲೆ “ಕೌನ್ ಹಿಂದೂ, ಕೌನ್ ಮುಸ್ಲಿಂ? ಬಪ್ಪನ ಶಕ್ತಿ ಮತ್ತು ಕರಾಚಿಯ ಸೌಂದರ್ಯ” ಎಂಬ ಬರಹವನ್ನು ಜೋಡಿಸಲಾಗಿದೆ. ಜಾತಿ, ಧರ್ಮಗಳ ಗಡಿಯನ್ನು ಮೀರಿ ಕಲೆ ಮತ್ತು ಮಾನವೀಯತೆ ಹೇಗೆ ಜನರನ್ನು ಒಂದಾಗಿಸುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆಯಾಗಿ ಹೊರಹೊಮ್ಮಿದೆ.
ನೆಟ್ಟಿಗರ ಪ್ರಶಂಸೆ, ಭಾವುಕ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ಜನರ ಗಮನ ಸೆಳೆದಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಪ್ರೀತಿಯ ಸಂಕೇತವಾದ ಹೃದಯದ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ. ನೆಟ್ಟಿಗರು ಕಲಾವಿದನ ಕೌಶಲ್ಯ ಹಾಗೂ ಈ ಭಾವೈಕ್ಯತೆಯ ಸನ್ನಿವೇಶವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಮಾನವೀಯತೆಯೇ ಜಗತ್ತಿನ ಅತ್ಯುತ್ತಮ ಧರ್ಮ”, “ಕಲೆ ಮತ್ತು ನಂಬಿಕೆಗೆ ಧರ್ಮದ ಎಲ್ಲೆಗಳಿಲ್ಲ”, ಹಾಗೂ “ಇದೇ ನಿಜವಾದ ಕಲೆ ಮತ್ತು ಸೌಹಾರ್ದತೆ” ಎಂದು ಸಾಲು ಸಾಲು ಧನಾತ್ಮಕ ಪ್ರತಿಕ್ರಿಯೆಗಳ ಮೂಲಕ ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ; ಆಟಗಾರರ ಒತ್ತಡ ಕಡಿಮೆ ಮಾಡಲು BCCI ಮಹತ್ವದ ನಿರ್ಧಾರ!


















