ವಾಷಿಂಗ್ಟನ್ : ವೆನೆಜುವೆಲಾ ಜೊತೆಗೆ ಜಾಗತಿಕ ಇಂಧನ ಕ್ಷೇತ್ರದಲ್ಲೇ ಅತ್ಯಂತ ಐತಿಹಾಸಿಕ ತೈಲ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಬೃಹತ್ ಒಪ್ಪಂದದ ಮೂಲಕ ದಕ್ಷಿಣ ಅಮೆರಿಕ ದೇಶವಾದ ವೆನೆಜುವೆಲಾದಲ್ಲಿ ಬಳಕೆಯಾಗದೆ ಉಳಿದಿರುವ ಅಪಾರ ಪ್ರಮಾಣದ ಕಚ್ಚಾ ತೈಲ ನಿಕ್ಷೇಪಗಳನ್ನು ಉತ್ಪಾದನಾ ವೆಚ್ಚದಲ್ಲೇ (at cost) ಪಡೆದುಕೊಳ್ಳಲು ಅಮೆರಿಕಕ್ಕೆ ಪೂರ್ಣ ಹಕ್ಕು ಸಿಗಲಿದೆ.
ಒಪ್ಪಂದದ ರೂಪುರೇಷೆಯೇನು?
ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್ ಖಾತೆಯಲ್ಲಿ ಈ ವಿಷಯವನ್ನು ಪ್ರಕಟಿಸಿರುವ ಟ್ರಂಪ್, ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರೂಬಿಯೋ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರ ನೇತೃತ್ವದಲ್ಲಿ ಈ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದಿದ್ದಾರೆ.
ರೊಡ್ರಿಗಸ್ ಸರ್ಕಾರ ನೀಡಿರುವ ಹೇಳಿಕೆಯಂತೆ, ಈ ಒಪ್ಪಂದವು 65 ಶತಕೋಟಿ ಬ್ಯಾರಲ್ ತೈಲ ಸಾಮರ್ಥ್ಯ ಹೊಂದಿರುವ 17 ತೈಲ ಕ್ಷೇತ್ರಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಇದರಿಂದ ವೆನೆಜುವೆಲಾಗೆ 100 ಶತಕೋಟಿ ಡಾಲರ್ ಖಾಸಗಿ ಹೂಡಿಕೆ ಹರಿದುಬರಲಿದ್ದು, ತೆರಿಗೆಯ ರೂಪದಲ್ಲಿ ದೇಶದ ಬೊಕ್ಕಸಕ್ಕೆ 209 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಆದಾಯ ಬರಲಿದೆ. ಈ ಒಪ್ಪಂದಕ್ಕಾಗಿ ಹೊಸ ಖಾಸಗಿ ಕಂಪನಿಯೊಂದನ್ನು ರಚಿಸಲಾಗುತ್ತಿದ್ದು, ಅದರಲ್ಲಿ ಶೇ. 55 ರಷ್ಟು ಉತ್ಪಾದನಾ ಪಾಲನ್ನು ಅಮೆರಿಕ ಹೊಂದಲಿದೆ. ಅಲ್ಲದೆ ಈ ಕಂಪನಿಗೆ ತೈಲ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು 100 ವರ್ಷಗಳ ಸುದೀರ್ಘ ಹಕ್ಕನ್ನು ನೀಡಲಾಗಿದೆ.
ಅಮೆರಿಕದ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ, ಅಮೆರಿಕಕ್ಕೆ ಕರೆದೊಯ್ದ ಸುಮಾರು ಒಂಬತ್ತು ತಿಂಗಳ ನಂತರ ಈ ಮಹತ್ವದ ಒಪ್ಪಂದ ನಡೆದಿದೆ. ಮಡುರೊ ಅಧಿಕಾರದಿಂದ ನಿರ್ಗಮಿಸಿದ ಬೆನ್ನಲ್ಲೇ ಅಧಿಕಾರಕ್ಕೆ ಬಂದ ಡೆಲ್ಸಿ ರೊಡ್ರಿಗಸ್, ತೈಲ ವಲಯವನ್ನು ಖಾಸಗೀಕರಣಗೊಳಿಸಲು ಹೊಸ ಕಾಯ್ದೆಗೆ ಸಹಿ ಹಾಕುವ ಮೂಲಕ ಎರಡು ದಶಕಗಳ ಸಮಾಜವಾದಿ ನೀತಿಯನ್ನು ಬದಲಾಯಿಸಿದ್ದರು. ಇದೀಗ ಸಾಲಿಸಿಟರ್ ಜನರಲ್ ಹಾಗೂ ಸಚಿವರ ಮಟ್ಟದಲ್ಲಿ ನಡೆದ ಮಾತುಕತೆ ಫಲಪ್ರದವಾಗಿದ್ದು, ಸೌದಿ ಅರಾಮ್ಕೊ ನಂತರ ಜಗತ್ತಿನ ಎರಡನೇ ಅತಿ ದೊಡ್ಡ ತೈಲ ನಿಕ್ಷೇಪ ಹೊಂದಿರುವ ಕಂಪನಿಯಾಗಿ ಈ ಹೊಸ ಸಂಸ್ಥೆ ಹೊರಹೊಮ್ಮಲಿದೆ.
ಭವಿಷ್ಯದ ಸವಾಲುಗಳು
ಇರಾನ್ ವಿರುದ್ಧದ ಅಮೆರಿಕ ಯುದ್ಧಕ್ಕೆ 6 ತಿಂಗಳು ಪೂರ್ಣಗೊಂಡಿದ್ದು, ಅಮೆರಿಕದಲ್ಲಿ ಇಂಧನ ಅಭಾವ ಮತ್ತು ತೈಲ ಬೆಲೆ ಏರಿಕೆಯ ಭಾರಿ ಒತ್ತಡ ಟ್ರಂಪ್ ಸರ್ಕಾರದ ಮೇಲಿದೆ. ಕಾರ್ಯಾಚರಣೆಗಾಗಿ ಅಮೆರಿಕ ತನ್ನ ಆಯಕಟ್ಟಿನ ತೈಲ ಸಂಗ್ರಹವನ್ನು ಕೂಡ ಬಳಸಿಕೊಂಡಿದ್ದು, ಸಂಗ್ರಹವು 300 ಮಿಲಿಯನ್ ಬ್ಯಾರಲ್‌ಗಿಂತಲೂ ಕೆಳಕ್ಕೆ ಕುಸಿದಿದೆ. ಅಮೆರಿಕದಲ್ಲಿ ಸದ್ಯ ಪೆಟ್ರೋಲ್ ಬೆಲೆ ಗ್ಯಾಲನ್‌ಗೆ 4.09 ಡಾಲರ್‌ಗೆ ಏರಿಕೆಯಾಗಿದೆ. ಈ ಒಪ್ಪಂದದಿಂದ ತಕ್ಷಣಕ್ಕೆ ಇಂಧನ ಬೆಲೆ ಇಳಿಕೆಯಾಗದಿದ್ದರೂ, ಸುದೀರ್ಘ ಅವಧಿಯಲ್ಲಿ ಅಮೆರಿಕದ ಮಿಲಿಟರಿ ಅಗತ್ಯತೆಗಳಿಗೆ ಹಾಗೂ ಆಯಕಟ್ಟಿನ ಸಂಗ್ರಹಕ್ಕೆ ತೈಲ ಪೂರೈಕೆಯಾಗಲಿದೆ. ಆದರೆ, ದಶಕಗಳಿಂದ ಹಾಳಾಗಿರುವ ವೆನೆಜುವೆಲಾದ ತೈಲ ಮೂಲಸೌಕರ್ಯಗಳನ್ನು ಸರಿಪಡಿಸಿ ತೈಲ ಉತ್ಪಾದನೆ ಹೆಚ್ಚಿಸಲು ಶತಕೋಟಿ ಡಾಲರ್ ಹೂಡಿಕೆ ಹಾಗೂ ಹಲವು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಕೊಲಂಬೊ ಟೆಸ್ಟ್‌ನಲ್ಲಿ ಕೊಹ್ಲಿ ಆಡಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು : ಮೊಹಮ್ಮದ್ ಕೈಫ್!



















