ಬೈಂದೂರು : ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಬೈಂದೂರು ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಾದದೊಂದಿಗೆ ಸಾಮೂಹಿಕ ವರಮಹಾಲಕ್ಷ್ಮಿ ವ್ರತ ಮತ್ತು ರಕ್ಷಾಬಂಧನ ಕಾರ್ಯಕ್ರಮ ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿತು. ಈ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಭಾಗಿನ ನೀಡಿ, ಸಾಮೂಹಿಕವಾಗಿ ವರಮಹಾಲಕ್ಷ್ಮಿ ವ್ರತಾಚರಣೆ ನಡೆಸಲಾಯಿತು.

ಇಂದಿನ ಆಧುನಿಕ ಯುಗದಲ್ಲಿ ಹಾಗೂ ಜೆನ್-ಝಿ ಯುವಜನರು ನಮ್ಮ ಸಂಪ್ರದಾಯಗಳಿಂದ ದೂರವಾಗುತ್ತಿರುವ ಕಾಲಘಟ್ಟದಲ್ಲಿ, ಬೈಂದೂರು ಚಾತುರ್ಮಾಸ್ಯವು ಪ್ರತಿದಿನವೂ ಹಿಂದೂ ಸಂಸ್ಕಾರಗಳ ಜೀವಂತ ಪಾಠಶಾಲೆಯಾಗಿ ರೂಪುಗೊಳ್ಳುತ್ತಿದೆ. ಧಾರ್ಮಿಕ ಆಚರಣೆಗಳ ಮೂಲಕ ಯುವಪೀಳಿಗೆಗೂ ಸಂಪ್ರದಾಯದ ಮಹತ್ವವನ್ನು ಪರಿಚಯಿಸುವ ಕೆಲಸ ನಡೆಯುತ್ತಿದ್ದು, ಸಾಮೂಹಿಕ ವರಮಹಾಲಕ್ಷ್ಮಿ ವ್ರತಾಚರಣೆಯು ಭಕ್ತರ ಮನಸ್ಸಿನಲ್ಲಿ ಧಾರ್ಮಿಕ ಭಾವನೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿತು.

ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ಕಾರ್ಯಕ್ರಮವು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಸಿದ್ಧಿ ಪಡೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಗಣ್ಯರು ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಬೈಂದೂರು ಚಾತುರ್ಮಾಸ್ಯವು ಧಾರ್ಮಿಕ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಹಿಂದೂ ಸಂಸ್ಕೃತಿ ಮತ್ತು ಸನಾತನ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತಿದೆ.

ಕಾರ್ಯಕ್ರಮದಲ್ಲಿ ಬೈಂದೂರು ಚಾತುರ್ಮಾಸ್ಯ ಅಧ್ಯಕ್ಷ ಗುರುರಾಜ್ ಗಂಟಿಹೊಳೆ, ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಸಂಚಾಲಕ ಶಿವರಾಜ್ ಪೂಜಾರಿ, ಮಹಿಳಾ ಅಧ್ಯಕ್ಷೆ ಜ್ಯೋತಿ ಪೂಜಾರಿ, ಅನಿತಾ ಮರವಂತೆ, ಶ್ಯಾಮಲಾ ಕುಂದರ್, ರಮೇಶ್ ಪೂಜಾರಿ, ನರಸಿಂಹ ಪೂಜಾರಿ ಸೇರಿದಂತೆ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ : ಜಪಾನ್‌ನ ಕಳಪೆ ವ್ಯವಸ್ಥೆಗೆ BCCI ಗರಂ : ಏಷ್ಯನ್ ಗೇಮ್ಸ್‌ನಿಂದ ಸ್ಟಾರ್ ಆಟಗಾರರು, ಸೂರ್ಯವಂಶಿ ಔಟ್?


















