ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ಸುಮಾರು 1,096 ಎಕರೆ ಅತ್ಯಂತ ಮೌಲ್ಯಯುತ ಮೀಸಲು ಅರಣ್ಯ (Reserve Forest) ಭೂಮಿಯನ್ನು ಅಕ್ರಮವಾಗಿ ಸರ್ಕಾರಿ ಖರಾಬ್ ಎಂದು ಖಾತೆ ಬದಲಾಯಿಸಿ ಕಬಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದು, ಸಿಬಿಐ ಅಥವಾ ಉನ್ನತ ಮಟ್ಟದ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಆಗ್ರಹಿಸಿದ್ದಾರೆ.
ದೂರಿನ ಪ್ರಕಾರ, ಸಂಬಂಧಿತ ಭೂಮಿಯು ಕಂದಾಯ ದಾಖಲೆಗಳಲ್ಲಿಯೇ ಅರಣ್ಯ ಭೂಮಿ ಎಂದು ನಮೂದಾಗಿದ್ದರೂ, ಅದನ್ನು ಅಕ್ರಮವಾಗಿ ಸರ್ಕಾರಿ ಖರಾಬ್ ಎಂದು ಖಾತೆ ಬದಲಾಯಿಸಿರುವ ಆರೋಪವಿದೆ. ಇದು ರಾಜ್ಯದಲ್ಲೇ ನಡೆದಿರುವ ಅತಿ ದೊಡ್ಡ ಭೂ ಹಗರಣಗಳಲ್ಲಿ ಒಂದಾಗಿರುವ ಶಂಕೆ ವ್ಯಕ್ತವಾಗಿದೆ.
ಭಾರತೀಯ ಅರಣ್ಯ ಕಾಯ್ದೆ-1927 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ-1980ರ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲೆಯ ಹಿಂದಿನ ಉಪವಿಭಾಗಾಧಿಕಾರಿ (ಎಸಿ), ಜಿಲ್ಲಾಧಿಕಾರಿ (ಡಿಸಿ), ಸಂಡೂರು ತಹಶೀಲ್ದಾರ್ ಸೇರಿದಂತೆ ಅರಣ್ಯ ಇಲಾಖೆಯ ಆರ್‌ಎಫ್‌ಒ, ಎಸಿಎಫ್ ಮತ್ತು ಡಿಸಿಎಫ್ ಅಧಿಕಾರಿಗಳ ಪಾತ್ರವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಅಲ್ಲದೆ, ಈ ಭೂ ವ್ಯವಹಾರದಲ್ಲಿ ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷಣೆ ಹಾಗೂ ಆಡಳಿತ ವ್ಯವಸ್ಥೆಯ ಕೆಲವು ಅಧಿಕಾರಿಗಳ ಪಾತ್ರವಿರುವ ಶಂಕೆಯಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
1,096 ಎಕರೆ ಮೀಸಲು ಅರಣ್ಯ ಭೂಮಿಯ ದಾಖಲೆ ಬದಲಾವಣೆ ಹೇಗೆ ನಡೆಯಿತು, ಇದಕ್ಕೆ ಯಾರು ಅನುಮತಿ ನೀಡಿದರು ಮತ್ತು ಇದರಿಂದ ಯಾರಿಗೆ ಲಾಭವಾಗಿದೆ ಎಂಬುದರ ಕುರಿತು ಆಳವಾದ ತನಿಖೆ ನಡೆಸಬೇಕು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೂಡಲೇ ಸಿಬಿಐ ಅಥವಾ ಉನ್ನತ ಮಟ್ಟದ ಎಸ್‌ಐಟಿ ತನಿಖೆಗೆ ಆದೇಶಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು ; ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿ ಬಂಧನ!



















