ಬೆಂಗಳೂರು : ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಸಂಜಯ್ ಬಾಂಗರ್ ಅವರ ಪುತ್ರಿ ಅನಯ ಬಾಂಗರ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಮಹಿಳಾ ಕ್ರಿಕೆಟ್ ಆಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿರುವ ನಿರ್ಧಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ್ತಿ ಮರಿಜಾನ್ನೆ ಕಾಪ್ ತೀವ್ರವಾಗಿ ಖಂಡಿಸಿದ್ದು, ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ಇವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಅನಯ ಬಾಂಗರ್ ಅವರಿಗೆ ಆಸ್ಟ್ರೇಲಿಯಾದಾದ್ಯಂತ ಮಹಿಳಾ ಸಮುದಾಯ ಮತ್ತು ಪ್ರೀಮಿಯರ್ ಕ್ರಿಕೆಟ್ ಆಡಲು ದಾರಿ ಮಾಡಿಕೊಡಲಾದ ನಿರ್ಧಾರದ ಬಗ್ಗೆ ಮರಿಜಾನ್ನೆ ಕಾಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಇದೊಂದು ಸಂಪೂರ್ಣ ಅಸಂಬದ್ಧ ನಿರ್ಧಾರ. ಇದನ್ನು ಯಾವುದೇ ಕಾರಣಕ್ಕೂ ಅನುಮತಿಸಬಾರದು” ಎಂದು ನೇರವಾಗಿ ಟೀಕಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದಶಕಕ್ಕೂ ಹೆಚ್ಚು ಕಾಲ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿರುವ ಹಾಗೂ ಮಹಿಳಾ ಕ್ರಿಕೆಟ್‌ನ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದ ಕಾಪ್ ಅವರ ಈ ಹೇಳಿಕೆ ಇದೀಗ ತೀವ್ರ ಸಂಚಲನ ಮೂಡಿಸಿದೆ.
ಮಹಿಳಾ ಕ್ರಿಕೆಟ್‌ನತ್ತ ಅನಯ ಬಾಂಗರ್ ಹೆಜ್ಜೆ
ಪುರುಷನಾಗಿ ಜನಿಸಿದ್ದ ಅನಯ ಬಾಂಗರ್, ಈ ಹಿಂದೆ ಮುಂಬೈನ ಯುವ ಕ್ರಿಕೆಟ್ ವ್ಯವಸ್ಥೆಯಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ ಮತ್ತು ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದರು. 2023 ರಲ್ಲಿ ತಾವು ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಗೆ ಒಳಗಾಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ತದನಂತರ 2026 ರಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಟ್ರಾನ್ಸ್‌ಜೆಂಡರ್ ಮಹಿಳೆಯಾಗಿರುವ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಅವಕಾಶ ನೀಡಿದೆ. ಆದರೆ ಇದು ಕೇವಲ ದೇಶೀಯ ಹಾಗೂ ಪ್ರೀಮಿಯರ್ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದು, ಮಾರ್ಚ್ 2027 ರಿಂದ ಎಲೈಟ್ ಮಹಿಳಾ ಕ್ರಿಕೆಟ್ ಪ್ರವೇಶಿಸುವ ಸಾಧ್ಯತೆಗಳಿವೆ. ತಾನಾಗಿಯೇ ಯಾವುದೇ ತಂಡದಲ್ಲಿ ಸ್ಥಾನ ಖಾತರಿಯಾಗಿಲ್ಲ, ನನ್ನ ಆಟದಿಂದಲೇ ನಾನು ಅವಕಾಶ ಗಿಟ್ಟಿಸಿಕೊಳ್ಳಲಿದ್ದೇನೆ ಎಂದು ಅನಯ ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಐಸಿಸಿ ನಿಯಮಗಳ ನಡುವಿನ ವ್ಯತ್ಯಾಸ
ಅನಯ ಅವರ ಈ ಕನಸಿಗೆ ಸದ್ಯ ಕೆಲವು ತಾಂತ್ರಿಕ ಅಡೆತಡೆಗಳೂ ಇವೆ. 2023 ರಲ್ಲಿ ಜಾರಿಗೆ ಬಂದ ಐಸಿಸಿ (ICC) ನಿಯಮಾವಳಿಗಳ ಪ್ರಕಾರ, ಪುರುಷರಾಗಿ ಪ್ರೌಢಾವಸ್ಥೆಯನ್ನು ಅನುಭವಿಸಿದ ಟ್ರಾನ್ಸ್‌ಜೆಂಡರ್ ಮಹಿಳೆಯರು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ನಿಯಮ ಹಾಗೂ ಆಂತರಿಕ ನೀತಿಯಡಿ ಅನಯ ಅವರಿಗೆ ಪ್ರೀಮಿಯರ್ ಕ್ರಿಕೆಟ್ ಆಡಲು ವಿನಾಯಿತಿ ನೀಡಲಾಗಿದೆ. ಈ ವಿಭಿನ್ನ ನಿಯಮಾವಳಿಗಳ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಅನಯ ಅವರು ಆಸ್ಟ್ರೇಲಿಯಾದ ಪ್ರತಿಷ್ಠಿತ ಮಹಿಳಾ ಬಿಗ್ ಬ್ಯಾಷ್ ಲೀಗ್ ಅಥವಾ ಉನ್ನತ ಮಟ್ಟದ ಎಲೈಟ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಜಪಾನ್‌ನ ಕಳಪೆ ವ್ಯವಸ್ಥೆಗೆ BCCI ಗರಂ : ಏಷ್ಯನ್ ಗೇಮ್ಸ್‌ನಿಂದ ಸ್ಟಾರ್ ಆಟಗಾರರು, ಸೂರ್ಯವಂಶಿ ಔಟ್?



















