ನವದೆಹಲಿ : ನೇಪಾಳ ಮತ್ತು ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಜಲಪ್ರಳಯದ ಬೆನ್ನಲ್ಲೇ ಚೀನಾವು ಟಿಬೆಟ್‌ನ ಯಾರ್ಲುಂಗ್ ಟ್ಸಾಂಗ್ಪೋ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಸ್ಥಾವರ (ಮೆಡೋಗ್ ಆಣೆಕಟ್ಟು)ದ ಕುರಿತು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹಿಮಾಲಯದ ಸೂಕ್ಷ್ಮ ಹಾಗೂ ಭೂಕಂಪನ ಪ್ರದೇಶದಲ್ಲಿ ಉಂಟಾಗುವ ಸಣ್ಣ ಪ್ರಕೃತಿ ವಿಕೋಪವೂ ಕೆಳಭಾಗದ ಪ್ರದೇಶಗಳಲ್ಲಿ ಎಷ್ಟು ದೊಡ್ಡ ಮಟ್ಟದ ವಿನಾಶ ಸೃಷ್ಟಿಸಬಲ್ಲದು ಎಂಬುದಕ್ಕೆ ನೇಪಾಳದ ದುರಂತವೇ ಸಾಕ್ಷಿ. ಹೀಗಾಗಿ ಚೀನಾದ ಈ ಬೃಹತ್ ಆಣೆಕಟ್ಟು ಭಾರತ ಹಾಗೂ ಬಾಂಗ್ಲಾದೇಶಕ್ಕೆ ಭವಿಷ್ಯದಲ್ಲಿ ‘ಜಲ ಬಾಂಬ್’ ಆಗಿ ಪರಿಣಮಿಸಲಿದೆಯೇ ಎಂಬ ಭೀತಿ ಉಂಟಾಗಿದೆ.
ನೇಪಾಳ-ಚೀನಾ ಗಡಿಯಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಕನಿಷ್ಠ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ಪರ್ವತ ಶ್ರೇಣಿಯಲ್ಲಿ ಉಂಟಾದ ಭೀಕರ ಹಿಮಕುಸಿತದಿಂದಾಗಿ ತ್ರಿಶೂಲಿ ನದಿಯ ನೀರ್ಮಟ್ಟ ಕೇವಲ ಅರ್ಧ ಗಂಟೆಯಲ್ಲಿ ಬರೋಬ್ಬರಿ ಒಂಬತ್ತು ಮೀಟರ್‌ಗಳಷ್ಟು ಏರಿಕೆಯಾಗಿತ್ತು.
ಈ ಘಟನೆಯನ್ನು ಉಲ್ಲೇಖಿಸಿರುವ ಪ್ರಸಿದ್ಧ ಕಾರ್ಯತಂತ್ರ ವಿಶ್ಲೇಷಕ ಬ್ರಹ್ಮ ಚೆಲಾನಿ ಸೇರಿದಂತೆ ಹಲವು ತಜ್ಞರು, ಹಿಮಾಲಯ ಪ್ರದೇಶದಲ್ಲಿ ಸಂಭವಿಸುವ ಸಣ್ಣ ಭೌಗೋಳಿಕ ಚಲನೆಗಳು ಕೂಡ ಸರಪಳಿಯಂತೆ ಬೃಹತ್ ಅನಾಹುತಗಳನ್ನು ಸೃಷ್ಟಿಸಬಲ್ಲವು ಎಂದು ಎಚ್ಚರಿಸಿದ್ದಾರೆ. ಈ ನೇಪಾಳದ ಪ್ರವಾಹಕ್ಕೂ ಚೀನಾದ ಡ್ಯಾಮ್‌ಗೂ ನೇರ ಸಂಬಂಧವಿಲ್ಲದಿದ್ದರೂ, ಹಿಮಾಲಯ ಪ್ರದೇಶದಲ್ಲಿ ಇಂತಹ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದು ಎಷ್ಟು ಅಪಾಯಕಾರಿ ಎಂಬುದನ್ನು ಇದು ತೋರಿಸಿಕೊಟ್ಟಿದೆ ಎಂದಿದ್ದಾರೆ.
3 ಪಟ್ಟು ಬೃಹತ್ ಯೋಜನೆಯಿಂದ ಭೂಕಂಪನದ ಅಪಾಯ
ಆಗ್ನೇಯ ಟಿಬೆಟ್‌ನ ಮೆಡೋಗ್ (ಮೊಟುವೊ) ಪ್ರದೇಶದಲ್ಲಿ ಚೀನಾ ಸುಮಾರು 170 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಯೋಜನೆ ನಿರ್ಮಿಸುತ್ತಿದೆ. ಪ್ರಸಿದ್ಧ ‘ತ್ರೀ ಗಾರ್ಜಸ್ ಡ್ಯಾಮ್’ಗಿಂತಲೂ ಮೂರು ಪಟ್ಟು ದೊಡ್ಡದಾದ ಈ ಜಲವಿದ್ಯುತ್ ಯೋಜನೆ ಸುಮಾರು 60 ಗಿಗಾವಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಆದರೆ, ಇತ್ತೀಚಿನ ಭೌಗೋಳಿಕ ಸಂಶೋಧನೆಗಳ ಪ್ರಕಾರ ಈ ಯೋಜನೆಯು ಅತ್ಯಂತ ಸಕ್ರಿಯವಾಗಿರುವ ‘ಪೈಝೆನ್ ಫಾಲ್ಟ್’ (ಭೂಕಂಪನ ಭ್ರಂಶ ರೇಖೆ) ಮೇಲೆಯೇ ನಿರ್ಮಾಣಗೊಳ್ಳುತ್ತಿದೆ. ಪೈಝೆನ್ ಭೂಕಂಪನ ವಲಯವು ಸಕ್ರಿಯವಾಗಿದ್ದು, ಸಣ್ಣ ಭೂಕಂಪ ಸಂಭವಿಸಿದರೂ ಉಂಟಾಗುವ ಬಂಡೆ ಕಲ್ಲುಗಳ ಕುಸಿತ ಮತ್ತು ಮಣ್ಣಿನ ಕುಸಿತಗಳು ಆಣೆಕಟ್ಟಿನ ಸುರಕ್ಷತೆಗೆ ಹಾಗೂ ನದಿ ಹರಿವಿಗೆ ಕಂಟಕವಾಗಲಿವೆ ಎಂದು ಭೌಗೋಳಿಕ ತಜ್ಞರು ಎಚ್ಚರಿಸಿದ್ದಾರೆ.
ಭಾರತ, ಬಾಂಗ್ಲಾದೇಶಕ್ಕೆ ಅಪಾಯ
ಟಿಬೆಟ್‌ನಲ್ಲಿ ಹರಿಯುವ ಯಾರ್ಲುಂಗ್ ಟ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುತ್ತಿದ್ದಂತೆ ಬ್ರಹ್ಮಪುತ್ರ ನದಿಯಾಗಿ ರೂಪಾಂತರಗೊಳ್ಳುತ್ತದೆ. ತದನಂತರ ಇದು ಬಾಂಗ್ಲಾದೇಶದ ಮೂಲಕ ಹರಿಯುತ್ತದೆ. ನದಿಯ ಮೇಲ್ಭಾಗದಲ್ಲಿ ಚೀನಾ ಜಲಾಶಯ ನಿರ್ಮಿಸುತ್ತಿರುವುದರಿಂದ ಕೆಳಭಾಗದಲ್ಲಿರುವ ಭಾರತದ ಈಶಾನ್ಯ ರಾಜ್ಯಗಳಿಗೆ (ವಿಶೇಷವಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ) ಹಾಗೂ ಬಾಂಗ್ಲಾದೇಶಕ್ಕೆ ನೀರಿನ ಹರಿವಿನ ಅಭಾವ ಉಂಟಾಗಬಹುದು ಅಥವಾ ಪ್ರವಾಹದ ಸಮಯದಲ್ಲಿ ಏಕಾಏಕಿ ನೀರು ಹರಿದುಬಂದು ಇಡೀ ಪ್ರದೇಶವೇ ಜಲಾವೃತಗೊಳ್ಳುವ ಅಪಾಯವಿದೆ.
ಚೀನಾ ಸರ್ಕಾರವು ಇದು ನದಿಯ ಸಹಜ ಹರಿವಿಗೆ ಧಕ್ಕೆ ತಾರದ ಯೋಜನೆಯೆಂದು ಸಮರ್ಥಿಸಿಕೊಂಡರೂ, ಪಾರದರ್ಶಕತೆಯ ಕೊರತೆ ಮತ್ತು ಹಿಮಾಲಯದ ಹವಾಮಾನ ಬದಲಾವಣೆಯ ಸವಾಲುಗಳು ಭಾರತದ ಆತಂಕವನ್ನು ಇಮ್ಮಡಿಗೊಳಿಸಿರುವುದಂತೂ ನಿಜ.
ಇದನ್ನೂ ಓದಿ : ಸಕ್ಕರೆ, ಈರುಳ್ಳಿ ಆಯ್ತು, ಶೀಘ್ರದಲ್ಲೇ ಮೊಟ್ಟೆ ಬೆಲೆಯಲ್ಲೂ 40% ಹೆಚ್ಚಳ ; ಏನಿದು ಎಥೆನಾಲ್ ನಂಟು?


















