ನವದೆಹಲಿ : ದೆಹಲಿಯ ಅತಿ ದುಬಾರಿ ‘ಲುಟ್ಯೆನ್ಸ್ ಬಂಗಲೆ ವಲಯ‘ದಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸಗಳ ನವೀಕರಣ, ಪೀಠೋಪಕರಣ ಹಾಗೂ ದುರಸ್ತಿ ಕಾರ್ಯಕ್ಕಾಗಿ ಕಳೆದ 2025-26ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 92.35 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅರ್ಜಿಗೆ ಕೇಂದ್ರ ಸಾರ್ವಜನಿಕ ನಿರ್ಮಾಣ ಇಲಾಖೆ (ಸಿಪಿಡಬ್ಲ್ಯೂಡಿ) ನೀಡಿದ ಉತ್ತರದಿಂದ ಈ ಮಾಹಿತಿ ಹೊರಬಂದಿದೆ. 2014-15 ರಲ್ಲಿ ಈ ವೆಚ್ಚ 27.47 ಕೋಟಿ ರೂ.ಯಷ್ಟಿತ್ತು. ಆದರೆ, ಕಳೆದ 11 ವರ್ಷಗಳಲ್ಲಿ ಮೂರು ಪಟ್ಟಿಗಿಂತಲೂ ಹೆಚ್ಚು ಜಿಗಿತ ಕಂಡಿದೆ.
11 ವರ್ಷಗಳಲ್ಲಿ ದುರಸ್ತಿಗೆ 547 ಕೋಟಿ ರೂ.
ಸಿಪಿಡಬ್ಲ್ಯೂಡಿ ನೀಡಿದ ಅಂಕಿಅಂಶಗಳ ಮಾಹಿತಿಯಂತೆ, 2014-15 ರಿಂದ 2025-26 ರ ನಡುವಿನ ಅವಧಿಯಲ್ಲಿ ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆಗಾಗಿ ಸರ್ಕಾರ ಒಟ್ಟು 547.68 ಕೋಟಿ ರೂ.ಗಳನ್ನು ವ್ಯಯಿಸಿದೆ. ಹಣದುಬ್ಬರ, ಕಚ್ಚಾವಸ್ತುಗಳ ಬೆಲೆ ಏರಿಕೆ ಹಾಗೂ ಶತಮಾನದಷ್ಟು ಹಳೆಯದಾದ ಈ ಬಂಗಲೆಗಳ ಸುಸ್ಥಿತಿ ಕಾಯ್ದುಕೊಳ್ಳುವುದು ಈ ವೆಚ್ಚ ಹೆಚ್ಚಾಗಲು ಪ್ರಮುಖ ಕಾರಣ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಸಾಮಾನ್ಯವಾಗಿ 70 ರಿಂದ 72 ಸದಸ್ಯರಿರುವ ಕೇಂದ್ರ ಸಚಿವ ಸಂಪುಟದ ಸರಾಸರಿ ಲೆಕ್ಕಾಚಾರ ನೋಡಿದರೆ, ಕಳೆದ ವರ್ಷವೊಂದರಲ್ಲೇ ಪ್ರತಿಯೊಬ್ಬ ಸಚಿವರ ಬಂಗಲೆಯ ದುರಸ್ತಿಗೆ ಸರಾಸರಿ 1.2 ಕೋಟಿ ರೂ. ವೆಚ್ಚವಾಗಿದೆ.
ಶತಮಾನ ಪೂರೈಸಿದ ಕಟ್ಟಡಗಳು
ಬ್ರಿಟಿಷ್ ಆಡಳಿತಾವಧಿಯಲ್ಲಿ ಅಂದರೆ 1912 ರಿಂದ 1930 ರ ನಡುವೆ ನಿರ್ಮಿಸಲಾದ ಈ ಅಧಿಕೃತ ನಿವಾಸಗಳು ಈಗ ಸುಮಾರು 80 ರಿಂದ 100 ವರ್ಷಗಳಷ್ಟು ಹಳೆಯದಾಗಿವೆ. ಸಿಪಿಡಬ್ಲ್ಯೂಡಿ ಅಧಿಕಾರಿಗಳ ಪ್ರಕಾರ, ಅನೇಕ ಬಂಗಲೆಗಳಲ್ಲಿ ನೀರು ಸೋರುವುದು, ಗೆದ್ದಲು ಹಿಡಿಯುವುದು, ವಿದ್ಯುತ್ ವೈರಿಂಗ್ ಹಳೆಯದಾಗಿರುವುದು ಮತ್ತು ಪ್ಲಂಬಿಂಗ್ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಕೆಲವೊಂದು ಕಟ್ಟಡಗಳು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಹಂತ ತಲುಪಿದ್ದು, ಅವುಗಳನ್ನು ನಿಯಮಿತವಾಗಿ ನವೀಕರಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಾಗುತ್ತಿರುವ ವಾರ್ಷಿಕ ಸರಾಸರಿ ವೆಚ್ಚ
ದಾಖಲೆಗಳ ಪ್ರಕಾರ, 2014 ರಿಂದ 2019ರ ಅವಧಿಯಲ್ಲಿ ಸಚಿವರ ನಿವಾಸಗಳ ದುರಸ್ತಿಗೆ ವರ್ಷಕ್ಕೆ ಸರಾಸರಿ 26.78 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ 2019ರಿಂದ 2024ರ ಅವಧಿಯಲ್ಲಿ ಈ ಸರಾಸರಿ ವಾರ್ಷಿಕ ವೆಚ್ಚ 50 ಕೋಟಿ ರೂ.ಗೆ ಏರಿಕೆಯಾಯಿತು. ನಂತರದ ವರ್ಷಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಿದ್ದು, 2024-25ರಲ್ಲಿ 71.98 ಕೋಟಿ ರೂ. ಹಾಗೂ 2025-26 ರ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯ 92.35 ಕೋಟಿ ರೂಪಾಯಿಗೆ ಬಂದು ತಲುಪಿದೆ.
ನವದೆಹಲಿಯ ಹೆಚ್ಚಿನ ಸರ್ಕಾರಿ ಬಂಗಲೆಗಳನ್ನು ಬ್ರಿಟಿಷ್ ಆಡಳಿತದ ಸಾರ್ವಜನಿಕ ನಿರ್ಮಾಣ ಇಲಾಖೆಯ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದರು ಎಂದು ವಿವರಿಸಿದ್ದಾರೆ. ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಸಿಸುತ್ತಿರುವ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆಯಲ್ಲಿ ಒಮ್ಮೆ ಹಳೆಯ ಸಂಸತ್ ಭವನ ಮತ್ತು ನಾರ್ತ್-ಸೌತ್ ಬ್ಲಾಕ್‌ಗಳ ವಾಸ್ತುಶಿಲ್ಪಿ ಹೆರ್ಬರ್ಟ್ ಬೇಕರ್ ವಾಸಿಸುತ್ತಿದ್ದರು ಎಂದು ಇತಿಹಾಸಕಾರ್ತಿ ಮತ್ತು ಲೇಖಕಿ ಸ್ವಪ್ನಾ ಲಿಡಲ್ ಅವರು ಈ ಬಂಗಲೆಗಳ ಐತಿಹಾಸಿಕ ಹಿನ್ನೆಲೆಯ ಬಗ್ಗೆ ವಿವರಿಸಿದ್ದಾರೆ.
ಇದನ್ನೂ ಓದಿ : ಗಡಿ ಮೀರಿದ ಕ್ರೀಡಾ ಬಾಂಧವ್ಯ : ಇಮ್ರಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಪಾಕ್ ಪ್ರಧಾನಿಗೆ 21 ದಿಗ್ಗಜರ ಮನವಿ



















