ನವದೆಹಲಿ : ಹಬ್ಬಗಳ ಋತು ಹತ್ತಿರವಾಗುತ್ತಿದ್ದಂತೆಯೇ ಸಕ್ಕರೆ ದರ ಏರಿಕೆಯ ಬೆನ್ನಲ್ಲೇ ಇದೀಗ ದೇಶಾದ್ಯಂತ ಈರುಳ್ಳಿ ಬೆಲೆ ದಿಢೀರ್ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಅಡುಗೆಮನೆಯ ಬಜೆಟ್ ಏರುಪೇರಾಗುವ ಲಕ್ಷಣಗಳು ಕಂಡುಬರುತ್ತಿವೆ. ದೇಶದಲ್ಲಿ ಈಗ ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ 42 ರೂಪಾಯಿಗೆ ತಲುಪಿದ್ದು, ಇದು ಕಳೆದ ವರ್ಷಕ್ಕಿಂತ ಶೇ.45ರಷ್ಟು ಹಾಗೂ ಕಳೆದ ತಿಂಗಳಿಗಿಂತ ಶೇಕಡಾ 19 ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಸದ್ಯ ಈರುಳ್ಳಿ ಬೆಲೆ ಕೆಜಿಗೆ 65 ರೂಪಾಯಿ ಗಡಿ ದಾಟಿದ್ದರೆ, ಚೆನ್ನೈನಲ್ಲಿ 58 ರೂಪಾಯಿಗೆ ಮಾರಾಟವಾಗುತ್ತಿದೆ.
ಹಳೆಯ ದಾಸ್ತಾನು ಖಾಲಿ, ಹೊಸ ಬೆಳೆ ವಿಳಂಬ
ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಲು ವಸಂತ ಋತುವಿನ ಬೆಳೆಯ ದಾಸ್ತಾನು ತೀರುತ್ತಿರುವುದು ಹಾಗೂ ಹೊಸ ಮುಂಗಾರು ಬೆಳೆಯ ಆಗಮನ ವಿಳಂಬವಾಗಿರುವುದೇ ಮುಖ್ಯ ಕಾರಣ ಎನ್ನಲಾಗಿದೆ. ಮಾರ್ಚ್-ಏಪ್ರಿಲ್‌ನಲ್ಲಿ ಕೊಯ್ಲು ಮಾಡಲಾದ ಈರುಳ್ಳಿಯನ್ನು ಶೇಖರಿಸಿಟ್ಟು ಅಕ್ಟೋಬರ್‌ವರೆಗೆ ಮಾರುಕಟ್ಟೆಗೆ ಪೂರೈಸಲಾಗುತ್ತದೆ. ಆದರೆ ಈ ಬಾರಿ ಮಾರ್ಚ್-ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ ಬಿದ್ದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಶೇಖರಿಸಿಟ್ಟಿದ್ದ ಈರುಳ್ಳಿ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮತ್ತೊಂದೆಡೆ, ಮುಂಗಾರು ತಡವಾದ್ದರಿಂದ ನಾಸಿಕ್ ವಲಯದಲ್ಲಿ ಮುಂಗಾರು ಈರುಳ್ಳಿ ಬಿತ್ತನೆ ವಿಳಂಬಗೊಂಡು ಕೊಯ್ಲು ತಡವಾಗುತ್ತಿದೆ.
ಬೆಲೆ ಶೇ. 118 ರಷ್ಟು ಏರಿಕೆ
ಚಿಲ್ಲರೆ ಮಾರುಕಟ್ಟೆಯಷ್ಟೇ ಅಲ್ಲದೆ ಸಗಟು ಮಾರುಕಟ್ಟೆಯಲ್ಲೂ ಈರುಳ್ಳಿ ಬೆಲೆ ಭಾರಿ ಜಿಗಿತ ಕಂಡಿದೆ. ಕೃಷಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕ್ವಿಂಟಾಲ್‌ಗೆ 2,897 ರೂಪಾಯಿಗೆ ತಲುಪಿದೆ. ಇದು ಕೇವಲ ಒಂದು ತಿಂಗಳ ಹಿಂದಿನ ಬೆಲೆಗಿಂತ ಶೇ.43ರಷ್ಟು ಹೆಚ್ಚು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 118.37 ರಷ್ಟು ಭಾರಿ ಏರಿಕೆಯಾಗಿದೆ.
ಮಹಾರಾಷ್ಟ್ರದ ನಾಸಿಕ್ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್‌ಗಾಗಿ ಈರುಳ್ಳಿ ಖರೀದಿಸುವ ಬೆಲೆಯನ್ನು ಪ್ರಸಕ್ತ ಋತುವಿನಲ್ಲಿ ಏಳು ಬಾರಿ ಹೆಚ್ಚಿಸಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತನ್ನ ಬಳಿಯಿರುವ ಬಫರ್ ಸ್ಟಾಕ್ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಹೆಚ್ಚಿನ ಬೆಲೆ ದಾಖಲಾಗಿರುವ ದೆಹಲಿ, ಚೆನ್ನೈ, ಕೊಚ್ಚಿ ಮತ್ತು ಗುವಾಹಟಿಯಂತಹ ಪ್ರಮುಖ ನಗರಗಳಿಗೆ ನಾಸಿಕ್‌ನಿಂದ ಈರುಳ್ಳಿ ತಲುಪಿಸಲು ‘ಕಾಂದಾ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಅತಿಯಾದ ಬೆಲೆ ಏರಿಕೆಯಾಗುತ್ತಿರುವ ನಗರಗಳಿಗೆ ತಕ್ಷಣವೇ ಪೂರೈಕೆ ಹೆಚ್ಚಿಸಿ ಬೆಲೆಯನ್ನು ಸ್ಥಿರಗೊಳಿಸುವುದು ಸರ್ಕಾರದ ಯೋಜನೆಯಾಗಿದೆ.
ಇತರೆ ತರಕಾರಿಗಳ ಬೆಲೆ ಇಳಿಕೆ, ಆದರೆ ಈರುಳ್ಳಿಯದ್ದೇ ಸವಾಲು
ವಿಶೇಷವೆಂದರೆ, ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದರೆ ಟೊಮೆಟೊ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಆಗಸ್ಟ್ ಮಧ್ಯದ ವೇಳೆಗೆ ಟೊಮೆಟೊ ಸಗಟು ಬೆಲೆ ಶೇ.58 ಮತ್ತು ಆಲೂಗಡ್ಡೆ ಬೆಲೆ ಶೇ.30ರಷ್ಟು ಇಳಿಕೆಯಾಗಿದೆ. ಆದರೆ ಭಾರತೀಯ ಅಡುಗೆಯಲ್ಲಿ ಈರುಳ್ಳಿ ಪ್ರಮುಖ ಪಾತ್ರ ವಹಿಸುವುದರಿಂದ ಒಟ್ಟಾರೆ ಆಹಾರ ಹಣದುಬ್ಬರದ ಮೇಲೆ ಇದು ತೀವ್ರ ಪರಿಣಾಮ ಬೀರಿದೆ. ಜುಲೈ ತಿಂಗಳ ಚಿಲ್ಲರೆ ಹಣದುಬ್ಬರ ಶೇಕಡಾ 4.45 ಕ್ಕೆ ಹಾಗೂ ಆಹಾರ ಹಣದುಬ್ಬರ ಶೇಕಡಾ 5.52 ಕ್ಕೆ ಏರಲು ಈರುಳ್ಳಿ ಬೆಲೆ ಏರಿಕೆಯೇ ಪ್ರಮುಖ ಕಾರಣ ಎನ್ನಲಾಗಿದೆ.
ಬೆಲೆ ಇಳಿಕೆ ಯಾವಾಗ?
ಮಾರುಕಟ್ಟೆ ತಜ್ಞರ ಪ್ರಕಾರ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಚಳಿಗಾಲದ ಋತುವಿನ ದಾಸ್ತಾನು ಸಂಪೂರ್ಣ ಖಾಲಿಯಾಗಲಿದ್ದು, ಮುಂಗಾರು ಬೆಳೆ ಮಾರುಕಟ್ಟೆಗೆ ಬರುವುದು ತಡವಾದರೆ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮುಂಬರುವ ಸೆಪ್ಟೆಂಬರ್ ತಿಂಗಳ ಹವಾಮಾನವು ಈರುಳ್ಳಿ ಪೂರೈಕೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಲಿದ್ದು, ನೂತನ ಬೆಳೆ ಉತ್ತಮವಾಗಿ ಮಾರುಕಟ್ಟೆಗೆ ಬಂದಾಗಷ್ಟೇ ಬೆಲೆ ಸಾಧಾರಣ ಮಟ್ಟಕ್ಕೆ ಮರಳಲಿದೆ.
ಇದನ್ನೂ ಓದಿ : ನೈಟ್‌ಕ್ಲಬ್ ಬಳಿ ಹೈಡ್ರಾಮಾ : ಕೈಕೋಳದಲ್ಲಿ ಇಂಗ್ಲೆಂಡ್ ವೇಗಿ ಬ್ರೈಡನ್ ಕಾರ್ಸ್.. ತನಿಖೆ ಆರಂಭಿಸಿದ ECB



















