ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೇ ಮೊದಲ ಬಾರಿಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲು ಮುಂದಾಗಿದೆ. ಆದರೆ ಈ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳಲ್ಲದೆ CBSE, ICSE, JNV ಸೇರಿದಂತೆ ಜಿಬಿಎ ವ್ಯಾಪ್ತಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. SSLCನಲ್ಲಿ ಶೇ.99 ಅಥವಾ ಅದಕ್ಕಿಂತ ಹೆಚ್ಚು, ಅಂದರೆ 625ಕ್ಕೆ ಕನಿಷ್ಠ 621 ಅಂಕ ಹಾಗೂ II PUCನಲ್ಲಿ ಶೇ.99 ಅಥವಾ ಅದಕ್ಕಿಂತ ಹೆಚ್ಚು, ಅಂದರೆ 600ಕ್ಕೆ ಕನಿಷ್ಠ 596 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತಿದೆ.
ಆದರೆ, ಜಿಬಿಎ ವ್ಯಾಪ್ತಿಯ ಸ್ವಂತ ಸರ್ಕಾರಿ ಶಾಲಾ-ಕಾಲೇಜುಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸದೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಸಾರ್ವಜನಿಕ ಹಣದಲ್ಲಿ ಪುರಸ್ಕಾರ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ. ಜಿಬಿಎ ವ್ಯಾಪ್ತಿಯ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್, ಪುಸ್ತಕ, ಶೂ ಸೇರಿದಂತೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಆರೋಪವಿದೆ. ಹಲವು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಕೆಲವು SSLC ಹಾಗೂ PUC ವಿಭಾಗಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
“ಮೊದಲು ಜಿಬಿಎ ಶಾಲೆಗಳ ಶಿಕ್ಷಣದ ಗುಣಮಟ್ಟ ಸುಧಾರಿಸಲಿ, ಶಿಕ್ಷಕರ ಕೊರತೆ ನೀಗಿಸಲಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲಿ. ನಂತರ ಪ್ರತಿಭಾ ಪುರಸ್ಕಾರದ ಬಗ್ಗೆ ಯೋಚಿಸಲಿ” ಎಂಬ ಒತ್ತಾಯವೂ ಕೇಳಿಬಂದಿದೆ. ಇದರ ನಡುವೆ, ಜಿಬಿಎ ಶಾಲಾ-ಕಾಲೇಜುಗಳಲ್ಲಿ ಶೇ.99ರ ಮಾನದಂಡ ತಲುಪಿರುವ ವಿದ್ಯಾರ್ಥಿಗಳೇ ಇಲ್ಲದಿದ್ದರೆ, ಜಿಬಿಎ ಹೆಸರಿನಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಔಚಿತ್ಯವೇನು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಖಾಸಗಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿಗಳೇ ತಮ್ಮ ಸಂಸ್ಥೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರೋತ್ಸಾಹ ನೀಡುತ್ತವೆ. ಹೀಗಿರುವಾಗ ತೆರಿಗೆದಾರರ ಹಣ ಬಳಸಿ ಮತ್ತೊಮ್ಮೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅಗತ್ಯವೇನು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮುಂದಿಟ್ಟಿದ್ದಾರೆ.
ಜಿಬಿಎ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳ ಗುಣಮಟ್ಟ ಸುಧಾರಣೆ, ಶಿಕ್ಷಕರ ನೇಮಕಾತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಫಲಿತಾಂಶ ಹೆಚ್ಚಿಸುವುದಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ‘ಪ್ರತಿಭಾ ಪುರಸ್ಕಾರ’ಕ್ಕಾಗಿ ಸಾರ್ವಜನಿಕ ಹಣ ಖರ್ಚು ಮಾಡುವುದು ಎಷ್ಟು ಸಮಂಜಸ ಎಂಬ ಚರ್ಚೆ ಇದೀಗ ತೀವ್ರಗೊಂಡಿದೆ.


















