ನವದೆಹಲಿ: ಭಾರತೀಯ ರೈಲ್ವೆಯ ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪೂರೈಸಲಾಗುವ ಕುಡಿಯುವ ನೀರು ಅತ್ಯಂತ ಕಲುಷಿತಗೊಂಡಿದ್ದು, ಅದರಲ್ಲಿ ಆರೋಗ್ಯಕ್ಕೆ ಕಂಟಕವಾಗಬಲ್ಲ ‘ಈ-ಕೋಲೈ‘ (E. Coli) ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂದು ಭಾರತದ ಮಹಾಲೇಖಪಾಲರ (CAG) ವರದಿ ಬಹಿರಂಗಪಡಿಸಿದೆ. ಆಸನಗಳು, ಶೌಚಾಲಯಗಳು ಮತ್ತು ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಪ್ರಯಾಣಿಕರ ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ರೈಲ್ವೆ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆಗಸ್ಟ್ 12ರಂದು ಸಂಸತ್ತಿನಲ್ಲಿ ಮಂಡಿಸಲಾದ ಈ ವರದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಾಟರ್ ಕೂಲರ್, ಪ್ಲಾಟ್‌ಫಾರ್ಮ್ ನಲ್ಲಿಗಳಲ್ಲಿ ಬ್ಯಾಕ್ಟೀರಿಯಾ ಪ್ರತ್ಯಕ್ಷ
ದೇಶದ ಒಟ್ಟು 512 ಉಪ ನಗರೇತರ (Non-Suburban) ರೈಲ್ವೆ ನಿಲ್ದಾಣಗಳ ಸೌಲಭ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿರುವ ಸಿಎಜಿ, 59 ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಬ್ಯಾಕ್ಟೀರಿಯಾಲಜಿಕಲ್ ತಪಾಸಣೆಯನ್ನೇ ನಡೆಸಿಲ್ಲ ಎಂದು ಹೇಳಿದೆ. ಇನ್ನು ತಪಾಸಣೆ ನಡೆಸಿದ ನಿಲ್ದಾಣಗಳ ಪೈಕಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT), ಕಲ್ಯಾಣ್, ಲೋನಾವಾಲಾ, ಹೈದರಾಬಾದ್, ಕೊಯಮತ್ತೂರು, ಪಾಲಕ್ಕಾಡ್ ಹಾಗೂ ಮಧುಪುರ ನಿಲ್ದಾಣಗಳ ವಾಟರ್ ಕೂಲರ್‌ಗಳಲ್ಲಿ ಪೂರೈಕೆಯಾಗುತ್ತಿದ್ದ ನೀರಿನಲ್ಲಿ ‘ಈ-ಕೋಲೈ’ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ.
ಇದಷ್ಟೇ ಅಲ್ಲದೆ, 2022-23 ಮತ್ತು 2023-24ರ ಸಾಲಿನಲ್ಲಿ ವಿವಿಧ ವಲಯಗಳ ಹತ್ತಾರು ನಿಲ್ದಾಣಗಳ ಪ್ಲಾಟ್‌ಫಾರ್ಮ್ ನಲ್ಲಿಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳಲ್ಲೂ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ನೀರು ಸೇವನೆಗೆ ಯೋಗ್ಯವಾಗಿಲ್ಲ ಎಂಬುದು ಸಾಬೀತಾಗಿದೆ.
ಮೂಲಸೌಕರ್ಯ ಪೂರೈಸುವಲ್ಲಿ ರೈಲ್ವೆ ಸಚಿವಾಲಯ ವಿಫಲ
2018ರಲ್ಲಿ ರೈಲ್ವೆ ಮಂಡಳಿಯು ಜಾರಿಗೊಳಿಸಿದ ನಿಯಮಾವಳಿಗಳ ಪ್ರಕಾರ ದೇಶದ ಎಲ್ಲಾ ವರ್ಗದ ನಿಲ್ದಾಣಗಳಲ್ಲಿಯೂ ಶುದ್ಧ ಕುಡಿಯುವ ನೀರು, ಆಸನಗಳು, ವಿಶ್ರಾಂತಿ ಕೊಠಡಿಗಳು, ಶೌಚಾಲಯಗಳು, ಫ್ಯಾನ್‌ಗಳು ಮತ್ತು ಪಾದಚಾರಿ ಮೇಲ್ಸೇತುವೆಗಳಂತಹ ಕನಿಷ್ಠ ಅಗತ್ಯ ಸೌಲಭ್ಯಗಳನ್ನು (MEA) ತಕ್ಷಣವೇ ಕಲ್ಪಿಸಬೇಕಿತ್ತು. ಆದರೆ, ಸಿಎಜಿ ಪರಿಶೀಲಿಸಿದ 512 ನಿಲ್ದಾಣಗಳ ಪೈಕಿ ಶೇ. 89ಕ್ಕಿಂತ ಹೆಚ್ಚು ಅಂದರೆ 458 ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿರುವುದು ವರದಿಯಲ್ಲಿ ವಿವರಿಸಲಾಗಿದೆ.
ದೇಶದ ಅತ್ಯಂತ ಪ್ರಮುಖ ಹಾಗೂ ದಟ್ಟಣೆಯ ನಿಲ್ದಾಣಗಳಾದ ನವದೆಹಲಿ, ಹೌರಾ, ಸೀಲ್ದಾ, ಮುಂಬೈ ಸೆಂಟ್ರಲ್ ಹಾಗೂ ಸಿಎಸ್‌ಎಂಟಿಯಂತಹ ‘ಎನ್‌ಎಸ್‌ಜಿ-1’ ಶ್ರೇಣಿಯ ಹೈಟೆಕ್ ನಿಲ್ದಾಣಗಳಲ್ಲೂ ಕುಡಿಯುವ ನೀರಿನ ನಲ್ಲಿಗಳು, ಶೌಚಾಲಯಗಳು, ಕಸದ ಬುಟ್ಟಿಗಳು, ಎಲೆಕ್ಟ್ರಾನಿಕ್ ಮಾಹಿತಿ ಫಲಕಗಳ ಕೊರತೆ ಇರುವುದು ಪತ್ತೆಯಾಗಿದೆ.
ಶುದ್ಧೀಕರಣ ಕಡ್ಡಾಯಕ್ಕೆ ಸಿಎಜಿ ಮಹತ್ವದ ಶಿಫಾರಸು
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಭಾರತೀಯ ರೈಲ್ವೆ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಸಿಎಜಿ ಸೂಚಿಸಿದೆ. ನಿಯಮಿತವಾಗಿ ನೀರಿನ ಪೈಪ್‌ಲೈನ್ ಮತ್ತು ವಾಟರ್ ಕೂಲರ್‌ಗಳ ತಪಾಸಣೆ ನಡೆಸಬೇಕು ಹಾಗೂ ಕಡ್ಡಾಯವಾಗಿ ವಿಶ್ವಸನೀಯ ಸಂಸ್ಥೆಗಳಿಂದ ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಶಿಫಾರಸು ಮಾಡಿದೆ. ಕೋಟ್ಯಂತರ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರೈಲ್ವೆ ಆಡಳಿತದ ಈ ನಿರ್ಲಕ್ಷ್ಯಕ್ಕೆ ದೇಶಾದ್ಯಂತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.



















