ಮುಂಬೈ: ಮಹಾರಾಷ್ಟ್ರದಲ್ಲಿ ನಿಷೇಧಿತ ಉತ್ಪನ್ನವಾಗಿರುವ ಪಾನ್ ಮಸಾಲಾವನ್ನು ‘ವಿಮಲ್ ಏಲಕ್ಕಿ’ (Vimal Elaichi) ಜಾಹೀರಾತಿನ ಮೂಲಕ ಪರೋಕ್ಷವಾಗಿ ಪ್ರಚಾರ ಮಾಡುತ್ತಿರುವ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಕಲಿ ಪನೀರ್ ಸೇರಿದಂತೆ ಕಳಪೆ ಆಹಾರದ ವಿರುದ್ಧ ಸಮರ ಸಾರಿರುವ ಮಹಾರಾಷ್ಟ್ರದ ಆಹಾರ ಭದ್ರತಾ ಮುಖ್ಯಸ್ಥ ತುಕಾರಾಂ ಮುಂಧೆ ಅವರೇ ಈ ನೋಟಿಸ್ ಜಾರಿ ಮಾಡಿದ್ದಾರೆ.
9 ಪುಟಗಳ ಸುದೀರ್ಘ ನೋಟಿಸ್ ಜಾರಿ
ತುಕಾರಾಂ ಮುಂಧೆ ಅವರು ಆಗಸ್ಟ್ 11ರಂದು ಈ ನಟರಿಗೆ 9 ಪುಟಗಳ ಸುದೀರ್ಘ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ನಟರು ತಕ್ಷಣವೇ ಈ ಜಾಹೀರಾತು ಅಭಿಯಾನದಿಂದ ಹಿಂದೆ ಸರಿಯಬೇಕು ಮತ್ತು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಿಂದ ಈ ಸಂಬಂಧಿತ ಎಲ್ಲಾ ಪ್ರಚಾರದ ವಿಷಯಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, 15 ದಿನಗಳ ಒಳಗೆ ಈ ಕುರಿತು ಸ್ಪಷ್ಟನೆ ನೀಡುವಂತೆ ನಿರ್ದೇಶಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಪಾನ್ ಮಸಾಲಾದ ಉತ್ಪಾದನೆ, ಶೇಖರಣೆ, ಸಾಗಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ “ವಿಮಲ್ ಏಲಕ್ಕಿ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಜಾಹೀರಾತು ಮೂಲತಃ ‘ವಿಮಲ್ ಪಾನ್ ಮಸಾಲ್’ ಬ್ರ್ಯಾಂಡ್ ಅನ್ನು ನೆನಪಿಸುವಂತಿದೆ. ಏಲಕ್ಕಿಯ ನೆಪದಲ್ಲಿ ನಿಷೇಧಿತ ಪಾನ್ ಮಸಾಲಾ ಬ್ರ್ಯಾಂಡ್‌ನ ಚಹರೆಯನ್ನು ಪ್ರವರ್ಧಮಾನಕ್ಕೆ ತರುವುದು ಮತ್ತು ಗ್ರಾಹಕರನ್ನು ದಾರಿ ತಪ್ಪಿಸುವುದು ಕಾನೂನುಬಾಹಿರ. ಇದು ಪರೋಕ್ಷ ಪ್ರಚಾರ (Surrogate Advertising) ವ್ಯಾಪ್ತಿಗೆ ಬರಲಿದೆ” ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಭಾರಿ ದಂಡದ ಎಚ್ಚರಿಕೆ
ಸಿಗರೇಟ್, ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ತುಕಾರಾಂ ಮುಂಧೆ, ಈ ಕಂಪನಿಯೊಂದಿಗೆ ನಟರು ಮಾಡಿಕೊಂಡಿರುವ ಒಪ್ಪಂದದ ಪ್ರತಿಗಳು, ಪಾವತಿ ವಿವರಗಳು ಮತ್ತು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ದಾರಿತಪ್ಪಿಸುವ ಜಾಹೀರಾತುಗಳಲ್ಲಿ ಭಾಗಿಯಾದರೆ ನಟರಿಗೆ 10 ಲಕ್ಷದಿಂದ 50 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಮತ್ತು ಮೂರು ವರ್ಷಗಳ ಕಾಲ ಯಾವುದೇ ಉತ್ಪನ್ನಗಳ ಪ್ರಚಾರ ಮಾಡದಂತೆ ನಿಷೇಧ ಹೇರಲು ಅವಕಾಶವಿದೆ.
ಈ ಹಿಂದೆ 2022ರಲ್ಲಿ ಇದೇ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ನಟ ಅಕ್ಷಯ್ ಕುಮಾರ್ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು. ತದನಂತರ ಅವರು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿ, ಆ ಒಪ್ಪಂದದಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ನೀಡುವುದಾಗಿ ಘೋಷಿಸಿ ಪ್ರಚಾರದಿಂದ ಹಿಂದೆ ಸರಿದಿದ್ದರು.



















