ನವದೆಹಲಿ : ವಿದೇಶಿ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಲಿಂಗನ ಮಾಡಿಕೊಳ್ಳುವ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ವ್ಯಂಗ್ಯದ ವಿರುದ್ಧ ಆಡಳಿತಾರೂಢ ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ರಾಹುಲ್ ಗಾಂಧಿ ಅವರ ಸ್ವಂತ ಕುಟುಂಬದ ರಾಜತಾಂತ್ರಿಕ ಇತಿಹಾಸವನ್ನು ನೆನಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಕೌಂಟರ್ ನೀಡಿದ್ದಾರೆ.
ಗಾಂಧಿ ಕುಟುಂಬದ ಇತಿಹಾಸ ನೆನಪಿಸಿದ ಬಿಜೆಪಿ
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಮತ್ತು ಪ್ಯಾಲೆಸ್ತೀನ್ ನಾಯಕ ಯಾಸಿರ್ ಅರಾಫತ್ ಅವರನ್ನು ಆಲಿಂಗಿಸಿಕೊಂಡಿದ್ದ ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಎಂಟು ವರ್ಷಗಳ ಹಿಂದೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡಿದ್ದ ವೈರಲ್ ಫೋಟೋವನ್ನು ಸಹ ಪೋಸ್ಟ್ ಮಾಡಿ, ಕಾಂಗ್ರೆಸ್ ನಾಯಕನ ಕಾಲೆಳೆದಿದ್ದಾರೆ.
ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯೇನು?
ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಲೇವಡಿ ಮಾಡಿದ್ದರು. “ವಿದೇಶಾಂಗ ನೀತಿ ಎಂದರೆ ವಿಶ್ವ ನಾಯಕರನ್ನು ಆಲಿಂಗಿಸಿಕೊಳ್ಳುವುದು ಎಂದು ಪ್ರಧಾನಿ ಮೋದಿಯವರಿಗೆ ಯಾರು ಹೇಳಿಕೊಟ್ಟರೋ ಅರ್ಥವಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ತಮ್ಮ ಮಾತನ್ನು ನಿರೂಪಿಸಲು ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ರಾಹುಲ್ ಗಾಂಧಿ ಆಲಿಂಗಿಸಿಕೊಂಡಿದ್ದರು. ಈ ವೇಳೆ ಇಟಲಿ ಪ್ರಧಾನಿ ಮೆಲೋನಿ ಕುರಿತಂತೆ ದೀಕ್ಷಿತ್ ಮತ್ತು ರಾಹುಲ್ ನಡುವೆ ನಡೆದ ಸಂಭಾಷಣೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವರಿಂದ ತೀವ್ರ ಆಕ್ಷೇಪ
ರಾಹುಲ್ ಗಾಂಧಿ ಅವರ ಈ ನಡೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, “ರಾಹುಲ್ ಗಾಂಧಿ ಅವರೇ, ನೀವು ಬೆಳೆಯುವುದು ಯಾವಾಗ?” ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಯವರನ್ನು ಅಪಮಾನಿಸುವ ಮೂಲಕ ದೇಶದ ಕೋಟ್ಯಂತರ ಮತದಾರರನ್ನು ನೀವು ಅವಮಾನಿಸುತ್ತಿದ್ದೀರಿ ಎಂದು ಜೋಶಿ ಆಕ್ರೋಶ ಹೊರಹಾಕಿದ್ದಾರೆ.
‘ವಿಪಕ್ಷ ನಾಯಕನ ಹುದ್ದೆಗೆ ಶೋಭೆಯಲ್ಲ’
ಮತ್ತೊಂದೆಡೆ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಪ್ರತಿಕ್ರಿಯಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕನಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗೆ ಇಂತಹ ಅಸಭ್ಯ ಮತ್ತು ಅನಾಗರಿಕ ಭಾಷೆಯ ಬಳಕೆ ಶೋಭೆಯಲ್ಲ ಎಂದಿದ್ದಾರೆ. ಸೋಶಿಯಲ್ ಮೀಡಿಯಾ ಮೀಮ್ಸ್ ಮತ್ತು ರೀಲ್ಸ್‌ಗಳಿಗಾಗಿ ರಾಹುಲ್ ಗಾಂಧಿ ಇಂತಹ ಕೀಳು ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವಾನತಿ ಶ್ರೀನಿವಾಸನ್ ಅವರು, ಮಹಿಳೆಯರನ್ನು ಮತ್ತು ರಾಜಕೀಯ ಜೀವನವನ್ನು ಇಂತಹ ಅಶ್ಲೀಲ ಹಾಸ್ಯಗಳಿಗೆ ಬಳಸಿಕೊಳ್ಳುವುದು ರಾಜಕೀಯ ಅಪಕ್ವತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : “ಲೋಕಸಭಾ ಸ್ಥಾನ 543ರಲ್ಲೇ ಉಳಿಸಿ, ಶೇ.33 ಮಹಿಳಾ ಮೀಸಲಾತಿ ನೀಡಿ” : ಪ್ರಧಾನಿಗೆ ಸಿಎಂ ವಿಜಯ್ ಪತ್ರ



















