ಚೆನ್ನೈ : ಲೋಕಸಭೆಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 543ರಲ್ಲೇ ಶಾಶ್ವತವಾಗಿ ಉಳಿಸಲು ಸಂವಿಧಾನ ತಿದ್ದುಪಡಿ ತರಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಕ್ಷೇತ್ರಗಳ ವಿಂಗಡಣೆ (Delimitation) ಪ್ರಕ್ರಿಯೆಯಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಸದೀಯ ಪ್ರಾತಿನಿಧ್ಯದಲ್ಲಿ ನಷ್ಟವಾಗುವುದನ್ನು ತಪ್ಪಿಸುವಂತೆ ಹಾಗೂ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಖಾತರಿಪಡಿಸುವಂತೆ ಅವರು ಪ್ರಧಾನಿ ಮೋದಿಯವರನ್ನು ಕೋರಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಲಾದ ಮಹತ್ವದ ನಿರ್ಣಯದ ಪ್ರತಿಯನ್ನು ಲಗತ್ತಿಸಿ ಪ್ರಧಾನಿಯವರಿಗೆ ಗುರುವಾರ ಪತ್ರ ಬರೆದಿರುವ ಮುಖ್ಯಮಂತ್ರಿ ವಿಜಯ್, ಪ್ರಸ್ತುತ ರಾಜ್ಯವಾರು ಹಂಚಿಕೆಯಾಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. “ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 543ಕ್ಕೆ ಶಾಶ್ವತಗೊಳಿಸಬೇಕು. ಪ್ರತಿಯೊಂದು ರಾಜ್ಯಕ್ಕೂ ನೀಡಿರುವ ಪ್ರಸ್ತುತ ಸ್ಥಾನಗಳ ಪ್ರಮಾಣವನ್ನು ಯಥಾವತ್ತಾಗಿ ಮುಂದುವರಿಸಲು ಅಗತ್ಯ ಸಂವಿಧಾನ ತಿದ್ದುಪಡಿ ತರಬೇಕು” ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಿಗೆ ನಷ್ಟದ ಭೀತಿ
ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳು ಅನುಭವಿಸಬಹುದಾದ ನಷ್ಟದ ಕುರಿತು ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. 1967ರ ಕ್ಷೇತ್ರ ವಿಂಗಡಣೆಯ ವೇಳೆ ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ 41 ರಿಂದ 39 ಕ್ಕೆ ಕುಸಿದಿದ್ದನ್ನು ಪತ್ರದಲ್ಲಿ ಸ್ಮರಿಸಲಾಗಿದೆ. 1971ರ ನಂತರದ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದೇ ಆದಲ್ಲಿ, ದಕ್ಷಿಣದ ರಾಜ್ಯಗಳಿಗೆ ಶಾಶ್ವತ ಅನ್ಯಾಯವಾಗಲಿದೆ. ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ರಾಜ್ಯಗಳಿಗೇ ಇದು ಶಿಕ್ಷೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಮಹಿಳಾ ಮೀಸಲಾತಿ ಜಾರಿಗೆ ಆಗ್ರಹ
ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ರಕ್ಷಣೆಯ ಜೊತೆಗೆ, ಮುಂಬರುವ ಲೋಕಸಭಾ ಚುನಾವಣೆ ಹಾಗೂ ತದನಂತರ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ತಮಿಳುನಾಡು ಸರ್ಕಾರ ಬಲವಾಗಿ ಆಗ್ರಹಿಸಿದೆ. ಸಂಸತ್ತಿನಲ್ಲಿ 543 ಸ್ಥಾನಗಳನ್ನು ಉಳಿಸಿಕೊಳ್ಳುವುದು, ರಾಜ್ಯವಾರು ಪ್ರಸ್ತುತ ಹಂಚಿಕೆಯನ್ನು ಯಥಾವತ್ತಾಗಿ ಉಳಿಸುವುದು ಮತ್ತು ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವುದು. ಇವು ಮೂರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಾಗಿವೆ.
ಇದನ್ನೂ ಓದಿ : BCCI ಕ್ರಿಕೆಟ್ ನಿರ್ದೇಶಕರಾಗಿ VVS ಲಕ್ಷ್ಮಣ್ ನೇಮಕ ಸಾಧ್ಯತೆ : ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ



















