ನವದೆಹಲಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಜಾರಿಗೆ ತಂದಿರುವ ನೂತನ ವಿಬಿ-ಜಿ ರಾಮ್ ಜಿ ಹೆಸರಿನ ಯೋಜನೆ ಅನುಷ್ಠಾನಗೊಂಡ ಮೊದಲ ತಿಂಗಳಿನಲ್ಲೇ ಉದ್ಯೋಗ ಸೃಷ್ಟಿಯ ಪ್ರಮಾಣ ಅರ್ಧದಷ್ಟು ಕುಸಿದಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಸೃಷ್ಟಿಯಾದ ಮಾನವ ಉದ್ಯೋಗ ದಿನಗಳು ಶೇ.49.94 ರಷ್ಟು ಕುಸಿತ ಕಂಡಿದೆ.
ಎರಡು ದಶಕಗಳಷ್ಟು ಹಳೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯ ಬದಲಾಗಿ ಜುಲೈ 1 ರಿಂದ ‘ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ ಅಥವಾ ವಿಬಿ-ಜಿ ರಾಮ್ ಜಿ (VB-G RAM G) ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ ವರ್ಷದ ಜುಲೈನಲ್ಲಿ 15.33 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದ್ದರೆ, ಈ ವರ್ಷದ ಜುಲೈನಲ್ಲಿ ಈ ಸಂಖ್ಯೆ ಕೇವಲ 7.67 ಕೋಟಿಗೆ ಕುಸಿದಿದೆ. ಒಬ್ಬ ವ್ಯಕ್ತಿಗೆ ಒಂದು ದಿನ ಒದಗಿಸುವ ಕೆಲಸದ ಆಧಾರದ ಮೇಲೆ ಈ ಉದ್ಯೋಗ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ.
ಉದ್ಯೋಗ ದಿನ, ವೇತನ ಹೆಚ್ಚಳದ ಹೊರತಾಗಿಯೂ ಕುಸಿತ
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸುಧಾರಿತ ಆವೃತ್ತಿ ಇದು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದು, ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ ಮತ್ತು ಕೂಲಿ ಪ್ರಮಾಣವನ್ನೂ ಏರಿಕೆ ಮಾಡಲಾಗಿದೆ ಎಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಆಸ್ತಿ ಸೃಷ್ಟಿ ಹಾಗೂ ಜೀವನೋಪಾಯ ಸುಧಾರಣೆಗೆ ಈ ಯೋಜನೆ ಒತ್ತು ನೀಡುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಅಲ್ಲದೆ, 2025-26 ನೇ ಸಾಲಿಗೆ ಈ ಯೋಜನೆಗೆ 1.52 ಲಕ್ಷ ಕೋಟಿ ರೂ. ಅನುದಾನವನ್ನೂ ಮೀಸಲಿಡಲಾಗಿದೆ. ಆದಾಗ್ಯೂ, ಯೋಜನೆಯ ಮೊದಲ ತಿಂಗಳಿನಲ್ಲೇ ಉದ್ಯೋಗ ಪ್ರಮಾಣದಲ್ಲಿ ಭಾರಿ ಕುಸಿತ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಲವು ಗೊಂದಲಗಳು
ಈ ಯೋಜನೆಯ ಪರಿವರ್ತನೆಯಿಂದಾಗಿ ಅನುಷ್ಠಾನದ ಮೇಲೆ ಯಾವುದೇ ಪ್ರಭಾವ ಆಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪ್ರತಿಪಾದಿಸಿದೆ. ಕಳೆದ ತಿಂಗಳು ಸಂಸತ್ತಿನಲ್ಲಿ ನೀಡಿದ ಲಿಖಿತ ಉತ್ತರದಲ್ಲಿ, ಕೆಲಸ ಕೋರಿದ ಶೇ.99.5 ಕ್ಕಿಂತ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ತಿಂಗಳಾಂತ್ಯದ ಅಧಿಕೃತ ವರದಿಗಳು ಉದ್ಯೋಗ ಸೃಷ್ಟಿಯ ವೇಗ ಮಂದವಾಗಿರುವುದನ್ನು ಎತ್ತಿಹಿಡಿದಿವೆ. ಈ ಶೇಕಡಾ 50ರಷ್ಟು ಕುಸಿತಕ್ಕೆ ಸರ್ಕಾರಿ ಮಟ್ಟದಲ್ಲಿ ಇನ್ನೂ ಯಾವುದೇ ಅಧಿಕೃತ ವಿವರಣೆ ಬಂದಿಲ್ಲ. ಮುಂಬರುವ ತಿಂಗಳುಗಳ ಅಂಕಿಅಂಶಗಳು ಈ ಕುಸಿತಕ್ಕೆ ಯೋಜನೆಯ ಬದಲಾವಣೆಯೇ ಕಾರಣವೇ ಅಥವಾ ಗ್ರಾಮೀಣ ಭಾಗದಲ್ಲಿ ಕೆಲಸದ ಕೊರತೆ ಇದೆಯೇ ಎಂಬುದನ್ನು ಸ್ಪಷ್ಟಪಡಿಸಲಿವೆ.
ಇದನ್ನೂ ಓದಿ ; “ತಮಿಳು ನಮ್ಮ ಜೀವ” : ‘ವಂದೇ ಮಾತರಂ’ ಮೊದಲು ಹಾಡಬೇಕೆಂಬ ಕೇಂದ್ರದ ಸೂಚನೆಗೆ ವಿಜಯ್ ಸರ್ಕಾರ ಸಡ್ಡು



















