ನವದೆಹಲಿ : ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಣ ನೀತಿ(ಇ20)ಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಿತ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ “ಶುದ್ಧ ಪೆಟ್ರೋಲ್” ಬೇಕು ಎಂದು ಪಟ್ಟು ಹಿಡಿದಿರುವವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, “ಶುದ್ಧ ಪೆಟ್ರೋಲ್ ಏನು ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?” ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್‌ನಲ್ಲಿ ಶೇಕಡಾ 20 ರಷ್ಟು ಎಥನಾಲ್ ಬೆರೆಸುವ (E20) ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಜನಾರ್ದನ್ ಮಿಶ್ರಾ, ಭಾರತವು ತನ್ನ ತೈಲ ಅಗತ್ಯಕ್ಕಾಗಿ ಸಂಪೂರ್ಣವಾಗಿ ವಿದೇಶಿ ಆಮದಿನ ಮೇಲೆ ಅವಲಂಬಿತವಾಗಿದೆ ಎಂಬುದನ್ನು ನೆನಪಿಸಿದ್ದಾರೆ. ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದಲ್ಲಿ ಕೇವಲ ಶೇ.20 ರಷ್ಟು ಮಾತ್ರ ದೇಶೀಯವಾಗಿ ಉತ್ಪಾದನೆಯಾಗುತ್ತಿದ್ದು, ಉಳಿದ ಶೇ.80ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಇರುವ ಜಾಗತಿಕ ರಾಜಕೀಯ ಪರಿಸ್ಥಿತಿ ಮತ್ತು ಸಾರಿಗೆ ವೆಚ್ಚದ ಸವಾಲುಗಳಿಂದಾಗಿ, ತೈಲ ಟ್ಯಾಂಕರ್‌ಗಳು ಭಾರತ ತಲುಪಲು ಹೆಚ್ಚುವರಿಯಾಗಿ 18,000 ಕಿಲೋಮೀಟರ್ ಸುತ್ತಿ ಬರಬೇಕಾದ ಪರಿಸ್ಥಿತಿಯಿದೆ ಎಂದು ಅವರು ವಿವರಿಸಿದ್ದಾರೆ.
ವಿಪಕ್ಷಗಳ ವಿರೋಧಕ್ಕೆ ಸಂಸದರ ಪ್ರತ್ಯುತ್ತರ
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.20ರಷ್ಟು ಎಥನಾಲ್ ಮಿಶ್ರಣವಿರುವ ಇಂಧನ ನೀತಿ ಜಾರಿ ಬಗ್ಗೆ ಮಾತನಾಡಿದರೆ ಕೆಲವರು ಅನಗತ್ಯವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಿಶ್ರಾ ಕಿಡಿಕಾರಿದ್ದಾರೆ. “ಎಥನಾಲ್ ಕೆಲಸ ಮಾಡುವುದಿಲ್ಲ, ನಮಗೆ ಶುದ್ಧ ಪೆಟ್ರೋಲೇ ಬೇಕು ಎಂದು ಕೆಲವರು ಅಭಿಯಾನ ನಡೆಸುತ್ತಿದ್ದಾರೆ. ದೇಶದಲ್ಲೇ ಶುದ್ಧ ಪೆಟ್ರೋಲ್ ಸಿಗದಿದ್ದಾಗ ಅದು ಎಲ್ಲಿಂದ ಬರಬೇಕು? ನಿಮ್ಮ ಅಪ್ಪನ ಮನೆಯಿಂದ ಬರುತ್ತಾ? ಎಥನಾಲ್ ಉತ್ಪಾದಿಸದಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಎಲ್ಲಿಂದ ತರಲು ಸಾಧ್ಯ?” ಎಂದು ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೆಜಿಲ್ ಉದಾಹರಣೆ ನೀಡಿದ ಸಂಸದ
ವಿಶ್ವದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ಬ್ರೆಜಿಲ್ ದೇಶದಲ್ಲಿ ವಾಹನಗಳು ಶೇ.100 ರಷ್ಟು ಎಥನಾಲ್‌ನಿಂದಲೇ ಚಲಿಸುತ್ತಿವೆ ಎಂಬುದನ್ನು ಉಲ್ಲೇಖಿಸಿದ ಅವರು, ಭಾರತದಲ್ಲೂ ವಾಹನಗಳು ಎಥನಾಲ್ ಮಿಶ್ರಿತ ಇಂಧನದಿಂದ ಚಲಿಸುವ ಸಾಮರ್ಥ್ಯ ಹೊಂದಿವೆ ಎಂದಿದ್ದಾರೆ. ಎಥನಾಲ್ ಬಳಕೆಯಿಂದ ವಾಹನಗಳ ಇಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ತಜ್ಞರ ವರದಿಗಳು ದೃಢಪಡಿಸಿವೆ ಎಂದು ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಜೈವಿಕ ಅನಿಲ (ಬಯೋ ಗ್ಯಾಸ್) ಮತ್ತು ಸಿಎನ್‌ಜಿ ಸೇರಿದಂತೆ ಪರ್ಯಾಯ ಇಂಧನಗಳ ಪ್ರೋತ್ಸಾಹಕ್ಕೆ ಸರ್ಕಾರ ನೀಡುತ್ತಿರುವ ಆದ್ಯತೆಯ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬ್ಯಾರಿಕೇಡ್ ಮುರಿದು ಜಾರ್ಖಂಡ್ ವಿಧಾನಸೌಧಕ್ಕೆ ನುಗ್ಗಲು ವಿದ್ಯಾರ್ಥಿಗಳ ಯತ್ನ : ಜಲಫಿರಂಗಿ ಪ್ರಯೋಗ



















