ಬೆಂಗಳೂರು : ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಕಂಪನಿಗಳು ಜನರಿಗೆ ಸಾಲ ನೀಡಿ, ಸಾಲ ಮಾಡಿದವರು ಸರಿಯಾದ ಸಮಯಕ್ಕೆ ಮರುಪಾವತಿಸದಿದ್ದರೆ ಅವರಿಗೆ ಕಿರುಕುಳ ನೀಡುವ, ಬೆದರಿಕೆ ಹಾಕುವ ಪ್ರಕರಣಗಳು ಕರ್ನಾಟಕ ಸೇರಿ ದೇಶದ ಹಲವೆಡೆ ಕೇಳಿಬರುತ್ತಲೇ ಇರುತ್ತವೆ. ಇದನ್ನು ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಸಾಲ ವಸೂಲಾತಿಗಾಗಿ (Loan Recovery) ಕಠಿಣ ನಿಯಮಗಳ ಕರಡು ಪ್ರಕಟಿಸಿದೆ. ಸಾಲ ವಸೂಲಿ ಮಾಡುವ ಏಜೆಂಟರಿಗೆ ಕಠಿಣ ನಿಯಮ ರೂಪಿಸಲಾಗಿದೆ.
ಸಾಲಗಾರರ ಹಿತದೃಷ್ಟಿಯಿಂದ ಕೇಂದ್ರೀಯ ಬ್ಯಾಂಕ್ ಈಗ ಕರಡು ನಿಯಮಗಳನ್ನು ರೂಪಿಸಿದೆ. ಸಾಲಗಾರರಿಗೆ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ಅವಮಾನ ಮಾಡುವುದು ಸೇರಿ ಹಲವು ಅಪಸವ್ಯಗಳಿಗೆ ಆರ್ ಬಿಐ ಬ್ರೇಕ್ ಹಾಕಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ. ಹಾಗಾದರೆ, ಆರ್ ಬಿಐ ಹೊಸ ನಿಯಮಗಳೇನು? ಇದರಿಂದ ಸಾಲಗಾರರಿಗೆ ಹೇಗೆ ರಕ್ಷಣೆ ಸಿಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಏಜೆಂಟರಿಗೆ ಏನೆಲ್ಲ ಹೊಸ ನಿಯಮ?
• ಅಧಿಕೃತ ಗುರುತಿನ ಚೀಟಿ: ಏಜೆಂಟ್ ಗಳು ಯಾವಾಗಲೂ ಸರಿಯಾದ ಅಧಿಕೃತ ಪತ್ರ ಮತ್ತು ಗುರುತಿನ ಚೀಟಿಯನ್ನು ಹೊಂದಿರಬೇಕು.
• ಸಮಯ ಪಾಲನೆ: ಸಾಲಗಾರರನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯ ನಡುವೆ ಮಾತ್ರ ಸಂಪರ್ಕಿಸಬೇಕು.
• ಮುನ್ಸೂಚನೆ: ಸಾಲಗಾರರ ಮನೆಗೆ ಭೇಟಿ ನೀಡುವ ಮುನ್ನ ಕನಿಷ್ಠ ಒಂದು ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು.
• ದಾಖಲೀಕರಣ: ಎಲ್ಲಾ ವಸೂಲಾತಿ ಕರೆಗಳು ಮತ್ತು ಡಿಜಿಟಲ್ ಸಂವಹನಗಳನ್ನು ಕಡ್ಡಾಯವಾಗಿ ರೆಕಾರ್ಡ್ ಮಾಡಬೇಕು.
• ತರಬೇತಿ: ಏಜೆಂಟ್ ಗಳು ಕಡ್ಡಾಯವಾಗಿ ಪ್ರಮಾಣೀಕೃತ ತರಬೇತಿಯನ್ನು ಪಡೆದಿರಬೇಕು.
• ಸಾಲಗಾರರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುವುದು ಅಥವಾ ಸಾರ್ವಜನಿಕವಾಗಿ ಅವಮಾನಿಸುವುದು ಸಂಪೂರ್ಣ ನಿಷೇಧ.
• ಸಾಲ ಪಡೆದವರಿಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಲ್ಲದು.
ಈ ನಿಯಮಗಳನ್ನು ಉಲ್ಲಂಘಿಸಿದರೆ, ಏಜೆಂಟ್ ಮಾತ್ರವಲ್ಲದೆ ಆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯೂ ನೇರವಾಗಿ ಹೊಣೆಗಾರನಾಗಿರುತ್ತದೆ. ಸಾಲಗಾರರು ಯಾವುದೇ ಅಕ್ರಮ ನಡೆದರೆ ಕೂಡಲೇ ಆರ್‌ಬಿಐನ ‘ಕಂಪ್ಲೇಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್’ (cms.rbi.org.in) ನಲ್ಲಿ ದೂರು ದಾಖಲಿಸಬಹುದು.
ಇದನ್ನೂ ಓದಿ : ಕ್ಯಾಶ್ ಮೂಲಕ ಮನೆ ಬಾಡಿಗೆ ಪಾವತಿಸುತ್ತಿದ್ದೀರಾ? ಹಾಗಾದ್ರೆ, ನಿಮಗೆ ಹಲವು ರೀತಿಯಲ್ಲಿ ಲಾಸ್!



















