ಇಸ್ಲಾಮಾಬಾದ್ : ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನ, ಇದೀಗ ದೇಶದಲ್ಲಿನ ನೈಜ ಪರಿಸ್ಥಿತಿಯ ಮಾಹಿತಿ ಹೊರಜಗತ್ತಿಗೆ ತಲುಪುವುದನ್ನು ತಡೆಯಲು ವಿದೇಶಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಕ್ರಮ ಕೈಗೊಂಡಿದೆ.
‘ವಿದೇಶಿ ಮಾಧ್ಯಮ ಸೌಲಭ್ಯ ಮಾರ್ಗಸೂಚಿಗಳು 2026’ರ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ವಿದೇಶಿ ಪತ್ರಕರ್ತರು ಇಸ್ಲಾಮಾಬಾದ್, ಲಾಹೋರ್ ಮತ್ತು ಕರಾಚಿ ನಗರಗಳನ್ನು ಹೊರತುಪಡಿಸಿ ದೇಶದ ಬೇರೆ ಯಾವುದೇ ಭಾಗಕ್ಕೆ ಪ್ರಯಾಣಿಸಬೇಕಾದರೂ ಅಥವಾ ವರದಿಗಾರಿಕೆ ಮಾಡಬೇಕಾದರೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಕಡ್ಡಾಯವಾಗಿ ‘ನಿರಾಕ್ಷೇಪಣಾ ಪತ್ರ’ (NOC) ಪಡೆಯಬೇಕಾಗಿದೆ. ಮುದ್ರಣ, ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರತಿಯೊಬ್ಬ ಪ್ರತಿನಿಧಿಗೂ ಈ ನಿಯಮ ಅನ್ವಯವಾಗಲಿದೆ.
ಪ್ರವಾಸಕ್ಕೂ ಅನುಮತಿ ಬೇಕು:
ಹೊಸ ಮಾರ್ಗಸೂಚಿಯ ಪ್ರಕಾರ, ಪತ್ರಕರ್ತರು ಅಬೋಟಾಬಾದ್ ಅಥವಾ ಮುರ್ರಿಯಂತಹ ಪ್ರವಾಸಿ ತಾಣಗಳಿಗೆ ವೈಯಕ್ತಿಕ ರಜೆಯ ನಿಮಿತ್ತ ಭೇಟಿ ನೀಡಬೇಕೆಂದಿದ್ದರೂ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗಿದೆ.
ಇದರ ಜೊತೆಗೆ, ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿದೇಶಿ ಮಾಧ್ಯಮ ಸಂಸ್ಥೆಗಳು, ಫ್ರೀಲ್ಯಾನ್ಸರ್‌ಗಳು, ಸ್ಥಳೀಯ ನೆರವುಗಾರರು (Fixers) ಹಾಗೂ ವಿದೇಶಿ ಮಾಧ್ಯಮಗಳಿಗೆ ಲೇಖನ ಬರೆಯುವ ಪಾಕಿಸ್ತಾನಿ ಪತ್ರಕರ್ತರು ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ವಿದೇಶಿ ಮಾಧ್ಯಮಗಳ ಜೊತೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರ ಸಂಪೂರ್ಣ ಮಾಹಿತಿಯನ್ನು ಸರ್ಕಾರದ ನಿಯಂತ್ರಣದಲ್ಲಿಟ್ಟುಕೊಳ್ಳಲು ನಿರ್ಧರಿಸಲಾಗಿದೆ.
ವಿಶ್ವಮಟ್ಟದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹರಣದ ಆತಂಕ
ಹೊಸ ನಿಯಮಗಳ ಪ್ರಕಾರ ಪ್ರೆಸ್ ಕಾರ್ಡ್ ಅಥವಾ ಮಾನ್ಯತೆ (Accreditation) ಪಡೆಯಲು ವಾರಗಳ ಕಾಲ ಕಾಯಬೇಕಿದ್ದು, ಇದು ತುರ್ತು ವರದಿಗಾರಿಕೆಗೆ ಬಹುದೊಡ್ಡ ತಡೆಯಾಗಲಿದೆ. ಬಲೂಚಿಸ್ತಾನ ಹಾಗೂ ಖೈಬರ್ ಪಖ್ತುನ್ಖ್ವಾದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಸರ್ಕಾರದ ವೈಫಲ್ಯಗಳು ಜಾಗತಿಕ ಮಟ್ಟದಲ್ಲಿ ಪ್ರಸಾರವಾಗುವುದನ್ನು ತಡೆಯಲು ಪಾಕಿಸ್ತಾನ ಸರ್ಕಾರ ಈ ತಂತ್ರ ಹೂಡಿದೆ ಎಂದು ಮಾಧ್ಯಮ ತಜ್ಞರು ವಿಶ್ಲೇಷಿಸಿದ್ದಾರೆ. ಸರ್ಕಾರದ ಈ ಕಟ್ಟುನಿಟ್ಟಿನ ಹೆಜ್ಜೆಯು ಜಾಗತಿಕ ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಿಕಾ ಸ್ವಾತಂತ್ರ್ಯ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ದುಬೈನಲ್ಲಿ 20 ನಿಮಿಷಗಳಲ್ಲಿ 7 ಭೀಕರ ಸ್ಫೋಟ : ಇರಾನ್-ಅಮೆರಿಕ ಸಂಘರ್ಷದ ನಡುವೆಯೇ ಘಟನೆ



















