ಲಾಸ್ ಏಂಜಲೀಸ್: ನ್ಯೂಯಾರ್ಕ್ ಬಳಿಕ ಇದೀಗ ಅಮೆರಿಕದ ಪ್ರಮುಖ ನಗರಗಳ ಸಾಲಿನಲ್ಲಿ ನಿಲ್ಲುವ ಲಾಸ್ ಏಂಜಲೀಸ್ಗೂ ಶೀಘ್ರದಲ್ಲೇ ಭಾರತೀಯ ಮೂಲದ ಮೇಯರ್ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ನಗರದ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕೇರಳ ಮೂಲದ ನಗರ ಯೋಜನಾ ತಜ್ಞೆ ನಿತ್ಯಾ ರಾಮನ್ ಅವರು ಪ್ರಸ್ತುತ ಮೇಯರ್ ಕ್ಯಾರನ್ ಬಾಸ್ ವಿರುದ್ಧ ಸದ್ಯಕ್ಕೆ ರೋಚಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ವರ್ಷ ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದ ಜೋಹ್ರಾನ್ ಮಮ್ದಾನಿ ಅವರ ಹಾದಿಯಲ್ಲೇ ಈಗ 45 ವರ್ಷದ ನಿತ್ಯಾ ರಾಮನ್ ಕೂಡ ಇತಿಹಾಸ ಬರೆಯುವ ಸನ್ನಿಹದಲ್ಲಿದ್ದಾರೆ.
ಮತ ಎಣಿಕೆಯಲ್ಲಿ ರೋಚಕ ತಿರುವು
ಆರಂಭಿಕ ಮತ ಎಣಿಕೆಯಲ್ಲಿ ಪ್ರಸ್ತುತ ಮೇಯರ್ 73 ವರ್ಷದ ಕ್ಯಾರನ್ ಬಾಸ್ ಅಲ್ಪ ಮುನ್ನಡೆ ಪಡೆದಿದ್ದರಾದರೂ, ಎಣಿಕೆ ಮುಂದುವರಿದಂತೆ ನಿತ್ಯಾ ರಾಮನ್ ಮೇಲುಗೈ ಸಾಧಿಸಿದ್ದಾರೆ. ಪ್ರಸ್ತುತ ಬಂದಿರುವ ಮತ ಎಣಿಕೆ ವಿವರಗಳ ಪ್ರಕಾರ, ನಿತ್ಯಾ ರಾಮನ್ ಅವರು 4 ಲಕ್ಷಕ್ಕೂ ಅಧಿಕ ಮತಗಳೊಂದಿಗೆ ಶೇ. 51.67 ರಷ್ಟು ಮತಗಳನ್ನು ಪಡೆದು ಅಲ್ಪ ಅಂತರದ ಮುನ್ನಡೆಯಲ್ಲಿದ್ದಾರೆ. ಇನ್ನು ಮೂರನೇ ಒಂದು ಭಾಗದಷ್ಟು ಮತಗಳ ಎಣಿಕೆ ಬಾಕಿ ಇದ್ದು, ಕುತೂಹಲಕ್ಕೆ ಕಾರಣವಾಗಿದೆ. ಫಲಿತಾಂಶ ಏನೇ ಬಂದರೂ ಬದಲಾವಣೆಯ ನಿರೀಕ್ಷೆಯಲ್ಲಿದ್ದೇವೆ ಎಂದು ನಿತ್ಯಾ ರಾಮನ್ ಬೆಂಬಲಿಗರಲ್ಲಿ ವಿಶ್ವಾಸ ತುಂಬಿದ್ದಾರೆ.
ಕಳೆದ ಅವಧಿಯಲ್ಲಿ ನಗರವನ್ನು ಮುನ್ನಡೆಸಿರುವ ಕ್ಯಾರನ್ ಬಾಸ್ ಅವರಿಗೆ ನಗರದಲ್ಲಿ ಎದುರಾದ ಕೆಲವು ಸವಾಲುಗಳು ಮತದಾರರ ಅಸಮಾಧಾನಕ್ಕೆ ಕಾರಣವಾಗಿವೆ. ನಗರವನ್ನು ಬಾಧಿಸಿದ ಭೀಕರ ಕಾಡ್ಗಿಚ್ಚಿನ ಸಮಯದಲ್ಲಿ ಬಾಸ್ ವಿದೇಶದಲ್ಲಿದ್ದುಕೊಂಡು, ಮನೆ ಇಲ್ಲದವರ (ಹೋಮ್ಲೆಸ್ನೆಸ್) ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದರು. ಸಾರ್ವಜನಿಕ ನೈರ್ಮಲ್ಯ ಹಾಗೂ ಮೂಲಸೌಕರ್ಯಗಳ ನಿರ್ವಹಣೆಯಲ್ಲಿನ ಲೋಪಗಳೂ ಜನರು ಅವರ ವಿರುದ್ಧ ತಿರುಗಿಬೀಳುವಂತೆ ಮಾಡಿದ್ದವು. ಸಾರ್ವಜನಿಕ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನೇಮಿಸಿಕೊಳ್ಳಬೇಕು ಎಂದು ಬಾಸ್ ಪ್ರತಿಪಾದಿಸಿದರೆ, ಪೊಲೀಸ್ ಇಲಾಖೆಯ ವೆಚ್ಚ ಕಡಿಮೆ ಮಾಡಿ ಸಾರ್ವಜನಿಕ ಸೌಲಭ್ಯಗಳಿಗೆ ಬಳಸಬೇಕು ಎಂಬುದು ನಿತ್ಯಾ ರಾಮನ್ ಅವರ ನಿಲುವಾಗಿತ್ತು.
ಪ್ರಮುಖ ನಾಯಕರು, ಸಾರ್ವಜನಿಕ ಬೆಂಬಲ
ಈ ಚುನಾವಣೆಯಲ್ಲಿ ಕ್ಯಾರನ್ ಬಾಸ್ ಅವರಿಗೆ ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್, ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರಂತಹ ಪ್ರಭಾವಿ ಡೆಮಾಕ್ರಟಿಕ್ ನಾಯಕರ ಬೆಂಬಲವಿದೆ. ಆದರೆ ನಿತ್ಯಾ ರಾಮನ್ ಅವರಿಗೆ ಬರ್ನಿ ಸ್ಯಾಂಡರ್ಸ್ ಅವರ ‘ಅವರ್ ರೆವಲ್ಯೂಷನ್’ ಮತ್ತು ‘ಸಿಯೆರಾ ಕ್ಲಬ್’ ನಂತಹ ಪ್ರಮುಖ ಸಾರ್ವಜನಿಕ ಸಂಘಟನೆಗಳು ಹಾಗೂ ಪರಿಸರ ಕಾಳಜಿಯ ಗುಂಪುಗಳ ಬೆಂಬಲ ದೊರೆತಿದೆ. ಗೃಹರಹಿತರ ಸಂಖ್ಯೆಯನ್ನು 2028 ರ ವೇಳೆಗೆ ಶೇಕಡಾ 50 ರಷ್ಟು ಕಡಿಮೆ ಮಾಡುವುದು ಮತ್ತು ಮೂಲಸೌಕರ್ಯ ಸುಧಾರಣೆ ನಿತ್ಯಾ ರಾಮನ್ ಅವರ ಪ್ರಮುಖ ಭರವಸೆಯಾಗಿದೆ.

















