ಕಠ್ಮಂಡು: ನೇಪಾಳದ ಸೊಲುಖುಂಬು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಭೀಕರ ಹೆಲಿಕಾಪ್ಟರ್ ಅಪಘಾತವೊಂದು ಸಂಭವಿಸಿದೆ. ಹೆಲಿಪ್ಯಾಡ್ನಲ್ಲಿ ಇಳಿಯುವ (ಲ್ಯಾಂಡಿಂಗ್) ಸಂದರ್ಭದಲ್ಲಿ ಎರಡು ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ವಿದೇಶಿ ಪ್ರಜೆಯೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಪೇರಿಚೆ ಎಂಬಲ್ಲಿ ಈ ದುರಂತ ಸಂಭವಿಸಿದೆ.
ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಸೊಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲಹಾಮು ಪೇರಿಚೆ ಹೆಲಿಪ್ಯಾಡ್ನಲ್ಲಿ ‘ಫಿಶ್ಟೇಲ್ ಏರ್’ ಮತ್ತು ‘ಡೈನಾಸ್ಟಿ ಏರ್’ ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್ಗಳು ಒಂದೇ ಸಮಯದಲ್ಲಿ ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ನೀಡಿರುವ ಮಾಹಿತಿಯಂತೆ, ಎರಡೂ ವಿಮಾನಗಳು ತೀರಾ ಹತ್ತಿರಕ್ಕೆ ಬಂದಾಗ ಅವುಗಳ ರೋಟರ್ ಬ್ಲೇಡ್ಗಳು (ಫ್ಯಾನ್ ಬ್ಲೇಡ್ಗಳು) ಪರಸ್ಪರ ಬಲವಾಗಿ ಡಿಕ್ಕಿ ಹೊಡೆದಿವೆ. ಈ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ರಕ್ಷಣಾ ಕಾರ್ಯಾಚರಣೆ
ಅಪಘಾತದಲ್ಲಿ ಮೃತಪಟ್ಟವರು ವಿದೇಶಿ ಪ್ರಜೆಯಾಗಿದ್ದು, ಅವರ ಗುರುತು ಹಾಗೂ ರಾಷ್ಟ್ರೀಯತೆಯ ವಿವರಗಳನ್ನು ಪೊಲೀಸರು ಇನ್ನಷ್ಟೇ ದೃಢಪಡಿಸಬೇಕಿದೆ. ದುರಂತದ ನಂತರ ಮೃತದೇಹವನ್ನು ಹೆಲಿಕಾಪ್ಟರ್ ಮೂಲಕ ಲುಕ್ಲಾ ಪ್ರದೇಶಕ್ಕೆ ರವಾನಿಸಲಾಗಿದೆ. ಗಾಯಗೊಂಡ ಮತ್ತೊಬ್ಬ ವ್ಯಕ್ತಿಯನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವಿಮಾನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ವಿಮಾನಯಾನ ಪ್ರಾಧಿಕಾರದ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭೂಲ್ ತಿಳಿಸಿದ್ದಾರೆ.
ಹಿಮಾಲಯದ ಮಡಿಲಿನಲ್ಲಿರುವ ನೇಪಾಳದಲ್ಲಿ ಪ್ರವಾಸಿಗರು, ಪರ್ವತಾರೋಹಿಗಳು, ಸರಕು ಸಾಗಣೆ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸಣ್ಣ ಹೆಲಿಕಾಪ್ಟರ್ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ದುರ್ಗಮ ಭೂಪ್ರದೇಶ ಹಾಗೂ ಹವಾಮಾನ ವೈಪರೀತ್ಯಗಳಿಂದಾಗಿ ಆಗಾಗ ಇಂತಹ ವಾಯು ದುರಂತಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.



















