ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಮತ್ತೆ ಹೆಚ್ಚಾಗಿದ್ದು, ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಕರಿಹೋಬನಹಳ್ಳಿಯಲ್ಲಿ ರಾತ್ರಿ ವೇಳೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ ಮೆರೆದಿದ್ದಲ್ಲೇ, ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿರುವುದು ಸೇರಿದಂತೆ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಕಿಡಿಗೇಡಿಗಳ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಮಾಹಿತಿಗಳ ಪ್ರಕಾರ, ಗಣಿ ಮತ್ತು ನಂಜುಂಡ ಎಂಬುವವರು ಗಾಂಜಾ ಹಾಗೂ ಡ್ರಗ್ಸ್ ಸೇವಿಸಿ ಏರಿಯಾದಲ್ಲಿ ಪದೇಪದೇ ಗಲಾಟೆ ಮಾಡುತ್ತಿದ್ದಾರೆ. ದಿನವೂ ಹೊಸಹೊಸ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ವ್ಹೀಲಿಂಗ್ ಮಾಡಿ ವಾಹನ ಸವಾರರು ಹಾಗೂ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎನ್ನಲಾಗಿದೆ.
ಆ.3ರಂದು ಆರೋಪಿಗಳು ಕಾರಿನ ಮೇಲೆ ಕಲ್ಲು ಎಸೆದು ಗಾಜು ಪುಡಿಗೈದಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದ ಸ್ಥಳೀಯರೊಂದಿಗೆ ಜಗಳವಾಡಿ ದಾಂಧಲೆ ನಡೆಸಿರುವ ಆರೋಪವೂ ಕೇಳಿಬಂದಿದೆ. ಕಾರಿನ ಮೇಲೆ ಕಲ್ಲು ಎಸೆದಿರುವ ದೃಶ್ಯ ಹಾಗೂ ವ್ಹೀಲಿಂಗ್ ಮಾಡಿರುವ ವಿಡಿಯೋಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಸ್ಥಳೀಯರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರು ಎಫ್‌ಐಆರ್ ದಾಖಲಿಸದೇ ಕೇವಲ ಎನ್‌ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ವಿಡಿಯೋ ಸಾಕ್ಷ್ಯಗಳಿದ್ದರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಪಿಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕರಿಹೋಬನಹಳ್ಳಿ ಭಾಗದಲ್ಲಿ ಪುಡಿ ರೌಡಿಗಳ ಹಾವಳಿಗೆ ಶಾಶ್ವತ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮದ್ರಾಸ್ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ಮೊಳಗಿದ ಧೋನಿ ಸೂಪರ್‌ಬೈಕ್ ಸದ್ದು!



















