ಮಂಗಳೂರು : ಮಂಗಳೂರಿನಲ್ಲಿ ರಾಜ್ಯದ ಮೊದಲ ಸಚಿವ ಸಂಪುಟ ಸಭೆ ನಡೆದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ನಗರದ ಮೀನುಗಾರಿಕಾ ಬಂದರಿಗೆ ದಿಢೀರ್ ಭೇಟಿ ನೀಡಿದ್ದಾರೆ. ಮಂಗಳೂರು ಬಂದರು ಬಳಿಯ ‘ದಕ್ಕೆ’ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಜೊತೆ ತೆರಳಿದ ಸಿಎಂ, ಬಂದರು ಪ್ರದೇಶದಲ್ಲಿ ಮೀನುಗಾರರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮೀನುಗಾರರ ಹಡಗುಗಳನ್ನು ನಿಲ್ಲಿಸುವ ಸ್ಥಳಕ್ಕೆ (ದಕ್ಕೆ) ತೆರಳಿ ಅಲ್ಲಿಯೇ ನಿಂತು ಮೀನುಗಾರರಿಂದ ಸಮಸ್ಯೆಗಳ ಮಾಹಿತಿಯನ್ನು ಡಿಕೆಶಿ ಪಡೆದಿದ್ದಾರೆ.

ಬಂದರು ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸಿಎಂ ಡಿಕೆಶಿ ತಾಜಾ ಮೀನುಗಳನ್ನು ವೀಕ್ಷಿಸಿದ್ದಾರೆ. ಇದೇ ವೇಳೆ ಕಿಂಗ್ ಫಿಶ್ ಮೀನು ಹಿಡಿದು ಸಿಎಂ ಫೋಸ್ ನೀಡಿದ ದೃಶ್ಯವೂ ವಿಶೇಷವಾಗಿತ್ತು. ಬಳಿಕ ದಕ್ಕೆ ಪ್ರದೇಶದಲ್ಲಿ ರೌಂಡ್ ಹಾಕಿದ ಸಿಎಂ, ಮೀನುಗಾರಿಕೆ, ಹಡಗು ನಿಲುಗಡೆ ಹಾಗೂ ಬಂದರು ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಆದರೆ ಸಿಎಂ ಭೇಟಿ ವೇಳೆ ದಕ್ಕೆ ಪ್ರದೇಶದಲ್ಲಿ ಸಾಮಾನ್ಯವಾಗಿ ನಡೆಯಬೇಕಿದ್ದ ವ್ಯಾಪಾರ-ವಹಿವಾಟು ಸ್ಥಗಿತಗೊಂಡು ಬಂದರು ಖಾಲಿ ಖಾಲಿಯಾಗಿ ಕಂಡುಬಂದಿರುವುದು ಸಿಎಂ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಅಧಿಕಾರಿಗಳೇ ಬಂದರು ವಹಿವಾಟು ಸ್ಥಗಿತಗೊಳಿಸಿದ ವಿಚಾರಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರ ಅಮಾನತಿಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಮಂಗಳೂರಿನಲ್ಲಿ ನಡೆದ ರಾಜ್ಯದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗಕ್ಕೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ಸಂಪುಟ ತೀರ್ಮಾನಿಸಿದೆ. ಹಲವು ವರ್ಷಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿದ್ದ ಬೇಡಿಕೆಗೆ ಸರ್ಕಾರ ಮಾನ್ಯತೆ ನೀಡಿದಂತಾಗಿದೆ.

ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಕ್ರಿಯೆಗೂ ಸರ್ಕಾರ ಮುಂದಾಗಿದೆ. ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಕಾಲ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಹಾಗೂ ಸ್ಥಳೀಯ ಭಾವನೆಗಳನ್ನು ಪರಿಗಣಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿಗೂ ಸಂಪುಟ ಅನುಮೋದನೆ ನೀಡಿದೆ. ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸಿ ಹೂಡಿಕೆ ಆಕರ್ಷಿಸಲು ಪ್ರೋತ್ಸಾಹ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಒಟ್ಟು ಸುಮಾರು ₹32,611 ಕೋಟಿ ಮೊತ್ತದ ಯೋಜನೆಗಳು ಮತ್ತು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೂ ಒತ್ತು ನೀಡಲಾಗಿದ್ದು, ಮುಲ್ಕಿಯಲ್ಲಿ 150 ಎಕರೆ ಪ್ರದೇಶದಲ್ಲಿ ಮೀನುಗಾರಿಕಾ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಮೆರೈನ್ ಬಯೋಟೆಕ್ನಾಲಜಿ ನೀತಿ, ಮೀನುಗಾರಿಕೆ ಹಾಗೂ ಬ್ಲೂ ಎಕಾನಮಿ ಕ್ಷೇತ್ರದ ಅಭಿವೃದ್ಧಿಗೂ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ : ಸಿಎಂ ಡಿಕೆಶಿ ಐತಿಹಾಸಿಕ ಘೋಷಣೆ!


















