ಬೆಂಗಳೂರು : ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿ ಸಮತಾ ಸೈನಿಕ ದಳ (SSD) ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಕರ್ನಾಟಕದಲ್ಲಿ ಅತೀ ಹೆಚ್ಚು ದಲಿತರು ವಾಸಿಸುವ ಜಿಲ್ಲೆಗಳ ಪೈಕಿ ಚಿಕ್ಕಬಳ್ಳಾಪುರ–ಕೋಲಾರ ಅವಳಿ ಜಿಲ್ಲೆಗಳು ಮುಂಚೂಣಿಯಲ್ಲಿದ್ದು, ಹೋರಾಟಗಾರರ ತವರು ಜಿಲ್ಲೆಗಳಾಗಿಯೂ ಹೆಸರುವಾಸಿಯಾಗಿವೆ. ಇಂತಹ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೇ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಬಹಿರಂಗ ಪತ್ರ ಮೂಲಕ ರಾಜ್ಯ ಸರ್ಕಾರದ ವಿರುದ್ದ ಅಸಮಾಧನ ಹೊರಹಾಕಿದ್ದಾರೆ.
ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಗಳಲ್ಲಿ ಇಂದಿಗೂ ಬಡತನ, ಅಸ್ಪೃಶ್ಯತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಗುಡಿಸಲು ಮನೆಗಳಂತಹ ಮೂಲಭೂತ ಸಮಸ್ಯೆಗಳು ಮುಂದುವರಿದಿವೆ. ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ಈ ಜಿಲ್ಲೆಗಳು ಇನ್ನೂ ಹಿಂದುಳಿದಿವೆ. ಪ್ರತಿದಿನ ಒಂದಲ್ಲೊಂದು ಸಮಸ್ಯೆಗಾಗಿ ಹೋರಾಟಗಳು ನಡೆಯುತ್ತಿದ್ದು, ಅನೇಕ ಹೋರಾಟಗಳು ತ್ಯಾಗ ಮತ್ತು ಬಲಿದಾನಗಳ ಮೂಲಕ ಯಶಸ್ಸು ಕಂಡಿವೆ. ಭಾಷಾವಾರು, ಪ್ರಾಂತ್ಯವಾರು ಸೇರಿದಂತೆ ಹಲವು ಚಳುವಳಿಗಳಲ್ಲಿ ಈ ಭಾಗದ ಜನರು ಒಗ್ಗಟ್ಟಿನಿಂದ ಭಾಗವಹಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇದೀಗ ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ತೀವ್ರ ಬರಗಾಲವನ್ನು ಎದುರಿಸುತ್ತಿವೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಬರದ ಹೊಡೆತ ಅನುಭವಿಸುತ್ತಿರುವ ಈ ಭಾಗದಲ್ಲಿ ಬಾಗೇಪಲ್ಲಿ, ಚೇಳೂರು ಹಾಗೂ ಗುಡಿಬಂಡೆ ತಾಲ್ಲೂಕುಗಳ ಜನರು ಇಂದಿಗೂ ಫ್ಲೋರೈಡ್ ಮಿಶ್ರಿತ ನೀರು ಕುಡಿಯುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು ಎಂದು ಜಿ.ಸಿ. ವೆಂಕಟರಮಣಪ್ಪ ಹೇಳಿದ್ದಾರೆ.
ಹಿಂದಿನ ಸಚಿವ ಸಂಪುಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೈರತಿ ಸುರೇಶ್ ಅವರನ್ನು ನೇಮಿಸಲಾಗಿದ್ದರೂ, ಜಿಲ್ಲೆಯ ಜನರಿಗೆ ಅವರ ಪರಿಣಾಮಕಾರಿ ಆಡಳಿತ ಕಾಣಿಸಿಕೊಂಡಿಲ್ಲ ಎಂಬ ಸಾರ್ವಜನಿಕ ಅಭಿಪ್ರಾಯವಿದೆ. ಸರ್ಕಾರದ ರಾಜಕೀಯ ಲೆಕ್ಕಾಚಾರಗಳು ಬೇರೆ ವಿಷಯವಾಗಬಹುದು. ಆದರೆ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ನ್ಯಾಯ ಎಂಬ ಪ್ರಶ್ನೆಯನ್ನು ಜಿ.ಸಿ. ವೆಂಕಟರಮಣಪ್ಪ ಎತ್ತಿದ್ದಾರೆ.
ಗಡಿನಾಡ ಹಾಗೂ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಸರ್ಕಾರ ಆ ಅವಕಾಶ ನೀಡದೇ ನಿರ್ಲಕ್ಷ್ಯ ವಹಿಸಿದೆ. ಒಂದು ಕಡೆ ಬರಗಾಲ, ಮತ್ತೊಂದು ಕಡೆ ಅತೀ ಹೆಚ್ಚು ದಲಿತ ಜನಸಂಖ್ಯೆ, ಇನ್ನೊಂದು ಕಡೆ ಬಡತನದಿಂದ ಬಳಲುತ್ತಿರುವ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಈ ನಿರ್ಧಾರಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಡ ಜಿಲ್ಲೆಗಳ ಜನರನ್ನು ಕಡೆಗಣಿಸುವ ರಾಜಕೀಯವನ್ನು ಜನರು ಒಪ್ಪುವುದಿಲ್ಲ. ಈಗ ಜನರು ಎಚ್ಚರಗೊಂಡಿದ್ದು, ತಮ್ಮ ಹಕ್ಕಿಗಾಗಿ ಧ್ವನಿ ಎತ್ತಲಿದ್ದಾರೆ ಎಂದು ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಬಹಿರಂಗ ಪತ್ರ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ : ಸಂಪುಟ ‘ವಿಸ್ತರಣೆ’ ಬೆನ್ನಲ್ಲೇ ಅಸಮಾಧಾನ ಸ್ಫೋಟ ; 10ಕ್ಕೂ ಹೆಚ್ಚು ‘ಕೈ’ ಶಾಸಕರು ಇಂದೇ ರಾಜೀನಾಮೆ?



















