ಬೆಂಗಳೂರು : ಸರಿಸುಮಾರು 2 ತಿಂಗಳ ರಾಜಕೀಯ ಕಸರತ್ತಿನ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದರೂ, ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇನ್ನೂ ಆರಿಲ್ಲ. ಹೈಕಮಾಂಡ್ ಕೊನೆಗೂ ಸಚಿವ ಸಂಪುಟಕ್ಕೆ ಅಂತಿಮ ಮುದ್ರೆ ಒತ್ತಿದ್ದರೂ, ಸಚಿವ ಸ್ಥಾನ ಕೈತಪ್ಪಿದ ಶಾಸಕರ ಅಸಮಾಧಾನ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸುವ ಲಕ್ಷಣಗಳು ಕಾಣಿಸುತ್ತಿವೆ.
ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸಂಪುಟದಲ್ಲಿದ್ದ 10ಕ್ಕೂ ಹೆಚ್ಚು ಸಚಿವರಿಗೆ ಅವಕಾಶ ಸಿಗದೆ ಹೈಕಮಾಂಡ್ ಹೊಸ ಮುಖಗಳಿಗೆ ಮಣೆ ಹಾಕಿದೆ. ಇದರಿಂದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವು ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಇಂದೇ ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಇನ್ನು, ಸಚಿವ ಸಂಪುಟ ವಿಸ್ತರಣೆ ಬಳಿಕ ನಿನ್ನೆ ನಡೆದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಬಸವರಾಜ ಶಿವಣ್ಣನವರ್‌ಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಸಿದ್ದು ಬಣದಲ್ಲೂ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.
ಸಚಿವ ಸ್ಥಾನ ವಂಚಿತರಾದ ಕೆಲ ಶಾಸಕರು ಕಾಂಗ್ರೆಸ್ ವಿರುದ್ಧವೇ ಬಂಡಾಯದ ಬಾವುಟ ಹಾರಿಸಲು ಚಿಂತನೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಚಿವ ಸ್ಥಾನ ಕೈತಪ್ಪಿದವರ ಪಟ್ಟಿಯಲ್ಲಿ ಯಶವಂತರಾಯಗೌಡ ಪಾಟೀಲ್, ಬೇಳೂರು ಗೋಪಾಲಕೃಷ್ಣ, ಟಿ.ಬಿ. ಜಯಚಂದ್ರ, ಬಿ.ಕೆ. ಸಂಗಮೇಶ್, ಸಿ.ಎಸ್. ನಾಡಗೌಡ, ತನ್ವೀರ್ ಸೇಠ್, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಬಸವರಾಜ ಶಿವಣ್ಣನವರ್, ಪ್ರಸಾದ್ ಅಬ್ಬಯ್ಯ, ಲಕ್ಷ್ಮೀ ಹೆಬ್ಬಾಳ್ಕರ್, ರಾಘವೇಂದ್ರ ಹಿಟ್ನಾಳ್ ಹಾಗೂ ಹಂಪಣ್ಣಗೌಡ ಬಾದರ್ಲಿ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡರೂ ಕಾಂಗ್ರೆಸ್‌ನ ಒಳ ಅಸಮಾಧಾನ ಯಾವ ಹಂತಕ್ಕೆ ತಲುಪಲಿದೆ, ಅಸಮಾಧಾನಿತ ಶಾಸಕರನ್ನು ಹೈಕಮಾಂಡ್ ಹೇಗೆ ಸಮಾಧಾನಪಡಿಸಲಿದೆ ಎಂಬುದು ಈಗ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಸಚಿವ ಸಂಪುಟ ಕಸರತ್ತು ಬೆನ್ನಲ್ಲೇ ಸಿಎಂ ಡಿಕೆಶಿಗೆ ಭಿನ್ನಮತದ ತಲೆನೋವು!


















