ಬೆಂಗಳೂರು : ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್‌ನಿಂದ ಸಚಿವರ ಪಟ್ಟಿಗಾಗಿ ಕಾದು ಕುಳಿತಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ವಿಸ್ತರಣೆ ಪಟ್ಟಿಗೆ ಹೈಕಮಾಂಡ್‌ನಿಂದ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆ ಹಿನ್ನೆಲೆ ಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದು, ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಬೆಳವಣಿಗೆಗಳ ಮೇಲೆಯೇ ಗಮನ ಹರಿಸಿದ್ದಾರೆ ಎನ್ನಲಾಗಿದೆ.
ಮಾಹಿತಿಗಳ ಪ್ರಕಾರ, ನಿನ್ನೆ ಕಾಂಗ್ರೆಸ್ ವರಿಷ್ಠರು ಸಿಎಂ ಡಿಕೆಶಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದು, ಅಂತಿಮ ಪಟ್ಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಇವತ್ತು ಇಡೀ ದಿನವನ್ನು ಈ ಪ್ರಕ್ರಿಯೆಗಾಗಿ ಕಾಯ್ದಿರಿಸಿರುವ ಸಿಎಂ ಡಿಕೆಶಿ, ಹೈಕಮಾಂಡ್‌ನಿಂದ ಯಾವುದೇ ಕ್ಷಣದಲ್ಲಿ ಪಟ್ಟಿ ಬರುವ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಕುರಿತು ರಾಜಭವನಕ್ಕೂ ಈಗಾಗಲೇ ಮೌಖಿಕ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಸಚಿವರ ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಇದುವರೆಗೆ ಲಿಖಿತವಾಗಿ ಯಾವುದೇ ಅಧಿಕೃತ ಸೂಚನೆ ಅಥವಾ ದಿನಾಂಕ ರವಾನೆಯಾಗಿಲ್ಲ ಎನ್ನಲಾಗಿದೆ. ಹೈಕಮಾಂಡ್‌ನಿಂದ ಅಧಿಕೃತ ಪಟ್ಟಿ ಬಂದ ತಕ್ಷಣ ಮುಂದಿನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತೀವ್ರ ಲಾಬಿ ನಡೆಸುತ್ತಿರುವ ನಡುವೆಯೇ, ಕಾಂಗ್ರೆಸ್ ಹೈಕಮಾಂಡ್‌ನ ಅಂತಿಮ ನಿರ್ಧಾರದತ್ತ ರಾಜ್ಯ ರಾಜಕೀಯ ವಲಯದ ಚಿತ್ತ ನೆಟ್ಟಿದೆ. ಇಂದು ಅಥವಾ ಶೀಘ್ರದಲ್ಲೇ ಸಚಿವರ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ನೀಟ್ ಅಕ್ರಮದ ಬೆನ್ನಲ್ಲೇ ಎಚ್ಚೆತ್ತ NTA : ಪ್ರಶ್ನೆ ಪತ್ರಿಕೆಗಳ ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಆಹ್ವಾನ!


















