ಮಂಗಳುರು : ಕಡಲತೀರ ಮಂಗಳೂರಿನಲ್ಲಿ ಇಂದು ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆಗೆ ಪಡಿಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಪ್ರಜಾ ಸೌಧದಲ್ಲಿ ಸಭೆ ಆರಂಭವಾಗಲಿದೆ. ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಸ್ತಾವನೆಗಳಿಗೆ ಸಭೆಯಲ್ಲಿ ಚರ್ಚೆ ಹಾಗೂ ಅನುಮೋದನೆ ಸಿಗುವ ನಿರೀಕ್ಷೆ ಇದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕರಾವಳಿ ಭಾಗದ ಜನರ ಗಮನ ಇದೀಗ ಈ ಸಭೆಯತ್ತ ನೆಟ್ಟಿದೆ.
ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಲ್ನಾಡ್ ಟೂರಿಸಂ ಕಾರ್ಪೊರೇಷನ್ ಸ್ಥಾಪನೆ ಹಾಗೂ ಕಡಲತೀರಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ನಿರೀಕ್ಷೆ ಇದೆ. ಕರಾವಳಿ ಮತ್ತು ಮಲ್ನಾಡ್ ಭಾಗದ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ನಿಗಮದ ಪ್ರಸ್ತಾವನೆ ಈಗಾಗಲೇ ಚರ್ಚೆಯಲ್ಲಿದೆ.
ಇನ್ನು ಬಂದರು ಮತ್ತು ಮೀನುಗಾರಿಕೆ ಕ್ಷೇತ್ರಕ್ಕೂ ಇಂದಿನ ಸಭೆಯಲ್ಲಿ ಮಹತ್ವ ಸಿಗುವ ಸಾಧ್ಯತೆ ಇದೆ. ಹಳೇ ಬಂದರು ಧಕ್ಕೆ ವಿಸ್ತರಣೆ, ಹೊಸ ಮೀನುಗಾರಿಕಾ ಜೆಟ್ಟಿಗಳ ನಿರ್ಮಾಣ, ಬಂದರುಗಳ ಆಧುನೀಕರಣ ಹಾಗೂ ನದಿ ಹೂಳೆತ್ತುವ ಕಾಮಗಾರಿಗಳಿಗೆ ಅನುಮೋದನೆ ಸಿಗುತ್ತಾ ಎಂಬ ಕುತೂಹಲವಿದೆ. ಬಂದರು, ಮೂಲಸೌಕರ್ಯ, ಮೀನುಗಾರಿಕೆ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಹೊಸ ಚೈತನ್ಯ ನೀಡುವುದು ಸಭೆಯ ಪ್ರಮುಖ ಉದ್ದೇಶಗಳಲ್ಲೊಂದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಬೆಳವಣಿಗೆಗೂ ಒತ್ತು ನೀಡುವ ನಿರೀಕ್ಷೆಯಿದೆ. ಬೆಂಗಳೂರಿನ ಹೊರತಾಗಿ ಮಂಗಳೂರಿನಲ್ಲಿ ಐಟಿ ಹಾಗೂ ಕೈಗಾರಿಕಾ ಯೋಜನೆಗಳಿಗೆ ಉತ್ತೇಜನ, ಮಂಗಳೂರು ಹೊರವಲಯದಲ್ಲಿ ಕೈಗಾರಿಕಾ ಕಾರಿಡಾರ್ ಸೇರಿದಂತೆ ಹಲವು ಪ್ರಸ್ತಾವನೆಗಳ ಬಗ್ಗೆ ನಿರೀಕ್ಷೆ ಇದೆ. ಉದ್ಯಮ ವಲಯವೂ ಕರಾವಳಿಯಲ್ಲಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದೆ.
ಇನ್ನು, ದೀರ್ಘಕಾಲದಿಂದ ಬಾಕಿ ಉಳಿದಿರುವ ಮರಳು ಮತ್ತು ಜಂಬಿಟ್ಟಿಗೆ ಗಣಿಗಾರಿಕೆ ನೀತಿ ಸರಳೀಕರಣದ ಬಗ್ಗೆಯೂ ನಿರೀಕ್ಷೆ ಮೂಡಿದೆ. ಕರಾವಳಿ ಭಾಗದ ಹಲವು ಸಂಘಟನೆಗಳು ಹಾಗೂ ಉದ್ಯಮ ವಲಯಗಳು ಇಂತಹ ಬಾಕಿ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿವೆ.
ಇದರ ನಡುವೆ ಮಂಗಳೂರು ನಗರದ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ₹350 ಕೋಟಿ ಪ್ರಸ್ತಾವನೆ ಪ್ರಮುಖ ನಿರೀಕ್ಷೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಹಲವು ಕಡೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ₹1,250 ಕೋಟಿ ಮೊತ್ತದ ಸಮಗ್ರ ಯೋಜನೆ ರೂಪಿಸಲಾಗಿದ್ದು, ಮೊದಲ ಹಂತದಲ್ಲಿ ₹350 ಕೋಟಿ ಬಿಡುಗಡೆಗೆ ಸಂಪುಟದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದರ ಜೊತೆಗೆ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಸಾರಿಗೆ, ಸಂಪರ್ಕ ವ್ಯವಸ್ಥೆ ಹಾಗೂ ಕರಾವಳಿ ಭಾಗದ ಹಲವು ದೀರ್ಘಕಾಲದ ಬೇಡಿಕೆಗಳ ಕುರಿತ ಪ್ರಸ್ತಾವನೆಗಳೂ ಸಂಪುಟದ ಮುಂದೆ ಬರಲಿವೆ. ದಕ್ಷಿಣ ಕನ್ನಡ, ಮಂಗಳೂರು ಹಾಗೂ ತುಳುನಾಡಿನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಮನವಿಗಳನ್ನು ಪರಿಗಣಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಹೀಗಾಗಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಕೇವಲ ಮಂಗಳೂರಿನ ಸಭೆಯಾಗದೆ ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರದ ಮುಂದಿನ ಹೆಜ್ಜೆ ಏನು ಎಂಬುದನ್ನು ನಿರ್ಧರಿಸುವ ಪ್ರಮುಖ ಸಭೆ ಎಂಬ ಕುತೂಹಲ ಮೂಡಿಸಿದೆ. ಯಾವ ಯೋಜನೆಗಳಿಗೆ ಅಂತಿಮ ಅನುಮೋದನೆ ಸಿಗಲಿದೆ, ಎಷ್ಟು ಅನುದಾನ ಘೋಷಣೆಯಾಗಲಿದೆ ಹಾಗೂ ಕರಾವಳಿಯ ಬಹುಕಾಲದ ಬೇಡಿಕೆಗಳಲ್ಲಿ ಯಾವುದಕ್ಕೆ ಪರಿಹಾರ ಸಿಗಲಿದೆ ಎಂಬುದು ಇಂದಿನ ಸಭೆಯ ಬಳಿಕ ಸ್ಪಷ್ಟವಾಗಲಿದೆ.
ಇದನ್ನೂ ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3 ಹುದ್ದೆಗಳ ನೇಮಕಾತಿ : ಈ ಜಿಲ್ಲೆಯವರಿಗೆ ಗುಡ್ ನ್ಯೂಸ್



















