ಮೈಸೂರು : ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಗೌರಿಪುರ ಗ್ರಾಮದ ಸಂತೋಷ್–ಐಶ್ವರ್ಯ ದಂಪತಿಯ ಪುತ್ರ ಮುಕುಂದ್ ಮಯೂರ್ ಮೃತ ಮಗು ಎಂದು ತಿಳಿದುಬಂದಿದೆ.
ಮಾಹಿತಿಗಳ ಪ್ರಕಾರ, ಮಗು ಅಳುತ್ತಿದ್ದುದನ್ನು ಗಮನಿಸಿದ ಸಂಬಂಧಿಕರ ಮಕ್ಕಳು ಅಂಗಡಿಯಿಂದ ಕುರ್‌ಕುರೆ ಪ್ಯಾಕೆಟ್ ಖರೀದಿಸಿ ತಂದು ಮಗುವಿಗೆ ನೀಡಿದ್ದಾರೆ. ಈ ವೇಳೆ ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್‌ನ್ನು ಮಗು ಕುರ್‌ಕುರೆಯೊಂದಿಗೆ ಬಾಯಿಗೆ ಹಾಕಿಕೊಂಡಿದೆ.
ಈ ವೇಳೆ ಪ್ಲಾಸ್ಟಿಕ್ ಬಾಲ್ ಮಗುವಿನ ಗಂಟಲಿನಲ್ಲಿ ಸಿಲುಕಿದ್ದು, ಉಸಿರಾಟಕ್ಕೆ ತೊಂದರೆಯಾಗಿ ಮಗು ಒದ್ದಾಡಲು ಆರಂಭಿಸಿದೆ. ತಕ್ಷಣ ಪೋಷಕರು ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮಗು ಉಸಿರುಗಟ್ಟಿ ಮೃತಪಟ್ಟಿದೆ. ದುರ್ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಕ್ಷೀರ ಸಂಜೀವಿನಿ ಯೋಜನೆ ಅಡಿಯಲ್ಲಿ ಹೈನುಗಾರಿಕೆಗೆ ₹60,000 ನೆರವು : ಅರ್ಜಿ ಸಲ್ಲಿಸುವುದು ಹೇಗೆ?



















