ನವದೆಹಲಿ : ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಪ್ರಧಾನಮಂತ್ರಿಗಳ ಪಾತ್ರವನ್ನು ಪ್ರಶ್ನಿಸುವುದಾಗಲಿ ಅಥವಾ ಅವರ ನಿರ್ಧಾರವನ್ನು ಅನುಮಾನದಿಂದ ನೋಡುವುದಕ್ಕಾಗಲಿ ಯಾವುದೇ ಆಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಮೂಲಕ ಪ್ರಧಾನಮಂತ್ರಿ, ಕೇಂದ್ರ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರನ್ನೊಳಗೊಂಡ ತ್ರಿಸದಸ್ಯ ಆಯ್ಕೆ ಸಮಿತಿಯ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ಪ್ರಬಲವಾಗಿ ಸಮರ್ಥಿಸಿಕೊಂಡಿದೆ.
‘ಪ್ರಧಾನಿ ಹುದ್ದೆಗೆ ತನ್ನದೇ ಆದ ಪಾವಿತ್ರ್ಯತೆಯಿದೆ’
ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಪ್ರಧಾನಮಂತ್ರಿಯವರ ಹುದ್ದೆಗೆ ತನ್ನದೇ ಆದ ಪಾವಿತ್ರ್ಯತೆ ಮತ್ತು ಗೌರವವಿದೆ. ಕಾರ್ಯಾಂಗವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂಬ ಕಲ್ಪನೆಯ ಮೇಲೆ ಸಂವಿಧಾನಿಕ ನ್ಯಾಯಾಲಯಗಳು ನಿರ್ಧಾರ ತಳೆಯಲಾಗುವುದಿಲ್ಲ.
ಪ್ರಧಾನಿಯವರ ನಿರ್ಧಾರವನ್ನೇ ನಂಬಲು ಸಾಧ್ಯವಿಲ್ಲ ಎಂದಾದರೆ, ನಾಳೆ ತಮ್ಮ ಸಂಪುಟದ ಸಚಿವರನ್ನು ಆಯ್ಕೆ ಮಾಡುವಾಗಲೂ ಅವರು ಮಾಜಿ ನ್ಯಾಯಮೂರ್ತಿಗಳು ಅಥವಾ ಹೊರಗಿನವರ ಸಲಹೆ ಪಡೆಯಬೇಕು ಎಂಬ ನಿಯಮ ರೂಪಿಸಬೇಕಾಗುತ್ತದೆಯೇ?” ಎಂದು ಪ್ರಶ್ನಿಸಿದರು. ಆಯ್ಕೆ ಸಮಿತಿಯನ್ನು ಅನುಮಾನಿಸುವುದು ಸಂಸತ್ತಿನ ಶಾಸನಬದ್ಧ ಬುದ್ಧಿವಂತಿಕೆಯನ್ನು ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲಿರುವ ನಂಬಿಕೆಯನ್ನು ಪ್ರಶ್ನಿಸಿದಂತಾಗುತ್ತದೆ ಎಂದು ಅವರು ವಾದಿಸಿದರು.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸತೀಶಚಂದ್ರ ಶರ್ಮಾ ಅವರಿದ್ದ ಪೀಠದ ಮುಂದೆ ಅವರು ಈ ವಾದ ಮಂಡಿಸಿದರು. 2023ರ ನೇಮಕಾತಿ ಕಾಯ್ದೆಯು ಸಂವಿಧಾನದ ವಿಧಿ 324 ರ ಅಡಿಯಲ್ಲಿ ಸಂಸತ್ತಿಗಿರುವ ಶಾಸನಬದ್ಧ ಅಧಿಕಾರಕ್ಕೆ ಸಂಬಂಧಿಸಿರುವುದರಿಂದ, ಈ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳುಳ್ಳ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕು ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಮೂರ್ತಿ ದೀಪಂಕರ್ ದತ್ತಾ, “ನಾವು ಪ್ರಧಾನ ಮಂತ್ರಿಯವರನ್ನು ನಂಬುವುದಿಲ್ಲವೇ? ಖಂಡಿತವಾಗಿಯೂ ನಂಬುತ್ತೇವೆ. ಆದರೆ, ವಿಷಯ ಪ್ರಧಾನಿಯವರ ಮೇಲಿನ ಅಪನಂಬಿಕೆಯದ್ದಲ್ಲ, ಬದಲಿಗೆ ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಾಯ್ದುಕೊಳ್ಳುವುದಾಗಿದೆ. ಚುನಾವಣಾ ಆಯುಕ್ತರು ಸ್ವತಂತ್ರವಾಗಿರಬೇಕು, ಹಾಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಆ ನಿಷ್ಪಕ್ಷತೆ ಎದ್ದು ಕಾಣಬೇಡವೇ?” ಎಂದು ಮರು ಪ್ರಶ್ನೆ ಹಾಕಿದರು.
ಕಾಯ್ದೆಯ ಹಿನ್ನೆಲೆಯೇನು?
ಈ ಹಿಂದಿನ ಕಾಯ್ದೆಯಲ್ಲಿ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಉನ್ನತ ಮಟ್ಟದ ಸಮಿತಿಯಲ್ಲಿ ಸರ್ವೋಚ್ಚ ನ್ಯಾಯಲಯದ ಮುಖ್ಯ ನ್ಯಾಯಮೂರ್ತಿಗಳೂ ಇದ್ದರೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತಂದು, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (CJI) ಬದಲಿಗೆ ಕೇಂದ್ರ ಸಂಪುಟ ಸಚಿವರೊಬ್ಬರನ್ನು ಸೇರ್ಪಡೆಗೊಳಿಸಿತ್ತು. ಇದರಿಂದಾಗಿ ಆಯ್ಕೆ ಸಮಿತಿಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಮೂರರಲ್ಲಿ ಎರಡು ಭಾಗದಷ್ಟು ಸಂಖ್ಯಾಬಲ ಸಿಕ್ಕಂತಾಯಿತು. ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್, ಈ ವಿಷಯವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೇ ಬೇಡವೇ ಎಂಬ ಪ್ರಾಥಮಿಕ ತೀರ್ಪನ್ನು ಕಾಯ್ದಿರಿಸಿದೆ.
ಇದನ್ನೂ ಓದಿ : ತ್ಯಾಜ್ಯ ವಿಂಗಡಿಸದ ಭೀಮಾ ಜ್ಯುವೆಲ್ಲರ್ಸ್‌ಗೆ 50 ಸಾವಿರ ದಂಡ!



















