ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ವಿವಿಧೆಡೆ ಇತ್ತೀಚೆಗಷ್ಟೇ ನಡೆದಿದ್ದ ‘ಜೆನ್ ಝಡ್’ (Gen Z) ಯುವಜನರ ಪ್ರತಿಭಟನೆಯ ಕುರಿತು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳು ಭಾರೀ ತೀವ್ರ ವಿವಾದಕ್ಕೆ ಕಾರಣವಾಗಿವೆ. ಪ್ರತಿಭಟನಾಕಾರರ ಭಾಷೆ ಮತ್ತು ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳನ್ನು ತೀವ್ರವಾಗಿ ನಿಂದಿಸಿರುವ ಅವರು, ಯುವ ಪೀಳಿಗೆಯನ್ನು ‘ಜನರೇಷನ್ ಗಟ್ಟರ್’ (ಚರಂಡಿ ಪೀಳಿಗೆ) ಎಂದು ಕರೆಯುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
‘ವಾಂತಿ ಬರುವಂತಿದೆ’: ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಕಂಗನಾ ಕಿಡಿ
ಪ್ರತಿಭಟನೆಯ ವೇಳೆ ಯುವಕರು ಬಳಸಿದ ಭಾಷೆ, ಫಲಕಗಳು ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಕಂಗನಾ, “ನನ್ನ ಜೀವನದಲ್ಲೇ ಇಷ್ಟೊಂದು ಅಸಹ್ಯಕರ ವಾತಾವರಣವನ್ನು ಒಂದೇ ಕಡೆ ನೋಡಿರಲಿಲ್ಲ. ಈ ಜೆನ್ ಝೆಡ್ ಪ್ರತಿಭಟನೆಯ ರೀಲ್ಸ್‌ಗಳು ವಾಂತಿ ಬರುವಂತಿವೆ. ಅವರು ಮಾತನಾಡುವ ರೀತಿ ಮತ್ತು ಬಳಸುವ ಭಾಷೆ ತೀರಾ ಕೆಳಮಟ್ಟದ್ದಾಗಿದೆ,” ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, “ಇವರನ್ನು ಹೆತ್ತು ಸಾಕಿ ಬೆಳೆಸುತ್ತಿರುವವರು ಯಾರು?” ಎಂದು ಯುವಕರ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಪೋಷಣೆಯನ್ನೂ ಪ್ರಶ್ನಿಸಿದ್ದಾರೆ.
‘ಗೃಹಣಿಯರಾಗಲೂ ಇವರು ಯೋಗ್ಯರಲ್ಲ’
ಪ್ರತಿಭಟನೆಯಲ್ಲಿದ್ದ ಮಹಿಳೆಯರನ್ನು, ವಿಶೇಷವಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆನ್ನಲಾದ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ಸಂಸದೆ, “ಸಂಸ್ಕೃತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾದ ಭಾರತದಲ್ಲಿ ತಮ್ಮನ್ನು ತಾವು ಜಿರಳೆಗಳು (cockroaches) ಎಂದು ಕರೆದುಕೊಳ್ಳುವ ಈ ಯುವಕರು ನಿಜಕ್ಕೂ ದೇಶಕ್ಕೆ ಕೊಳಕು ಮತ್ತು ಗಲೀಜನ್ನು ಹರಡುತ್ತಿದ್ದಾರೆ. ಇವರಲ್ಲಿ ಕೆಲವರ ನಡವಳಿಕೆಯೂ ಸರಿ ಇಲ್ಲ, ವ್ಯವಸ್ಥೆಗೆ ನೀಡಲು ಇವರ ಬಳಿ ಏನೂ ಇಲ್ಲ. ಇವರು ಎಷ್ಟೊಂದು ಭ್ರಷ್ಟ ಮತ್ತು ಅಸಹ್ಯಕರವಾಗಿದ್ದಾರೆಂದರೆ, ಕನಿಷ್ಠಪಕ್ಷ ಉತ್ತಮ ಗೃಹಣಿಯರಾಗಲೂ ಇವರು ಅರ್ಹರಲ್ಲ,” ಎಂದು ಟೀಕಿಸಿದ್ದಾರೆ.
ವಿಪಕ್ಷಗಳಿಂದ ವ್ಯಾಪಕ ಆಕ್ರೋಶ, ಪ್ರಧಾನಿ ಮೌನದ ಬಗ್ಗೆ ಪ್ರಶ್ನೆ
ಕಂಗನಾ ರಣಾವತ್ ಅವರ ಈ ಕೀಳುಮಟ್ಟದ ಹೇಳಿಕೆಗೆ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಪ್ರತಿಕ್ರಿಯಿಸಿ, “ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಹೆಣ್ಣುಮಕ್ಕಳನ್ನು ಪೊಲೀಸರು ಥಳಿಸಿದಾಗ ಒಬ್ಬ ಮಹಿಳೆಯಾಗಿ ಕಂಗನಾಗೆ ಕನಿಷ್ಠ ಅನುಕಂಪವೂ ಬರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಎಐಎಂಐಎಂ (AIMIM) ನಾಯಕ ವಾರಿಸ್ ಪಠಾಣ್ ಕಿಡಿಕಾರಿ, “ಕಂಗನಾಗೆ ನೀಟ್ (NEET) ಪರೀಕ್ಷೆಯ ವಿಸ್ತೃತ ರೂಪವೇ ತಿಳಿದಿದೆಯೇ ಎಂದು ಅನುಮಾನವಿದೆ. ತಮ್ಮ ಸಂಸದೆ ಯುವ ಪೀಳಿಗೆಯ ವಿರುದ್ಧ ಇಂತಹ ಅಸಂಸದೀಯ ಭಾಷೆ ಬಳಸುತ್ತಿರುವುದನ್ನು ಪ್ರಧಾನಿ ಮೋದಿ ಅವರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಂಗನಾ ಇಡೀ ಜೆನ್ ಝೆಡ್ ಸಮುದಾಯದ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಸಂಕಷ್ಟ – ನೀಟ್ ರೀತಿ KPSC ಅಕ್ರಮದ ವಿರುದ್ಧ ಹೋರಾಟಕ್ಕೆ ಸಜ್ಜಾದ Gen-Zಗಳು!


















