ಬೆಂಗಳೂರು : ಭಾರತದ ಮುಂಚೂಣಿ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇದೀಗ ತನ್ನ ಅತ್ಯಂತ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಕಾರನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸುತ್ತಿದೆ. ಜಪಾನ್ನಲ್ಲಿ ಈ ಹಿಂದೆ ಅನಾವರಣಗೊಂಡಿದ್ದ ಅತ್ಯಾಕರ್ಷಕ ‘ವಿಷನ್ ಇ-ಸ್ಕೈ’ (Vision e-Sky) ಕಾನ್ಸೆಪ್ಟ್ ಆಧಾರಿತ ಈ ಕಾರು ಇದೀಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಹಂತಕ್ಕೆ (ಟೆಸ್ಟಿಂಗ್) ಕಾಲಿಟ್ಟಿದೆ. ಟಾಟಾ ಮೋಟಾರ್ಸ್ನ ಜನಪ್ರಿಯ ಟಿಯಾಗೋ ಇವಿ ಹಾಗೂ ಎಂಜಿ ಕಾಮೆಟ್ ಸಣ್ಣ ಕಾರುಗಳಿಗೆ ನೇರ ಪೈಪೋಟಿ ನೀಡುವ ಉದ್ದೇಶದಿಂದ ಮಾರುತಿ ಈ ಕಾರನ್ನು ನಿರ್ಮಿಸುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ.
ರಸ್ತೆಗಿಳಿದಿದೆ ಮಾರುತಿಯ ಹೊಸ ಇವಿ ವಿಸ್ಮಯ
ಇತ್ತೀಚೆಗೆ ಆನ್ಲೈನ್ನಲ್ಲಿ ಸೋರಿಕೆಯಾದ ಸ್ಪೈ ಚಿತ್ರಗಳ ಪ್ರಕಾರ, ಈ ಹೊಸ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಜಾಗತಿಕ ಮಟ್ಟದಲ್ಲಿ ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಿದೆ. ಚಿತ್ರಗಳಲ್ಲಿ ಕಂಡುಬರುವಂತೆ ಕಾನ್ಸೆಪ್ಟ್ ಕಾರಿನಲ್ಲಿದ್ದ ನೀಲಿ ಬಣ್ಣದ ಬಾಡಿ ಹಾಗೂ ಬಿಳಿ ಬಣ್ಣದ ರೂಫ್ ಸಂಯೋಜನೆಯನ್ನೇ ಟೆಸ್ಟಿಂಗ್ ಮ್ಯೂಲ್ನಲ್ಲೂ ಉಳಿಸಿಕೊಳ್ಳಲಾಗಿದೆ.
ಆದರೆ ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಕಾರಿನಲ್ಲಿ ಹಲವು ಪ್ರಾಯೋಗಿಕ ಬದಲಾವಣೆಗಳನ್ನು ಮಾಡಲಾಗಿದೆ. ಕಾನ್ಸೆಪ್ಟ್ ಮಾದರಿಯಲ್ಲಿದ್ದ ಕ್ಯಾಮೆರಾ ಕನ್ನಡಿಗಳ ಬದಲು ಸಾಂಪ್ರದಾಯಿಕ ರಿಯರ್ ವಿವ್ ಮಿರರ್ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ ಬದಲಾಗಿ ಸಾಮಾನ್ಯ ಡೋರ್ ಹ್ಯಾಂಡಲ್ಗಳು ಹಾಗೂ ಆಕರ್ಷಕ ಏರೋ-ಅಲಾಯ್ ವೀಲ್ಗಳ ಬದಲಿಗೆ ಸದ್ಯಕ್ಕೆ ಸಾಮಾನ್ಯ ಸ್ಟೀಲ್ ವೀಲ್ಗಳನ್ನು ಬಳಸಲಾಗಿದೆ. ಮುಂದಿನ ಟೆಸ್ಟಿಂಗ್ ಹಂತಗಳಲ್ಲಿ ಏರೋ ವೀಲ್ಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಅತ್ಯಾಧುನಿಕ ವಿನ್ಯಾಸ ಹಾಗೂ ಪ್ರೀಮಿಯಂ ಫೀಚರ್ಗಳು
‘ಯೂನಿಕ್, ಸ್ಮಾರ್ಟ್, ಪಾಸಿಟಿವ್’ ಎಂಬ ಸುಜುಕಿಯ ನೂತನ ವಿನ್ಯಾಸ ತತ್ವದಡಿ ಈ ನಗರ ಸ್ನೇಹಿ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಈ ವಾಹನವು ಮಾರುತಿಯ ಭವಿಷ್ಯದ ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ವಿನ್ಯಾಸಗೊಳಿಸಲಾದ ನೂತನ ‘ಕೆ-ಇವಿ’ (K-EV) ಪ್ಲಾಟ್ಫಾರ್ಮ್ ಮೇಲೆ ನಿರ್ಮಾಣವಾಗಲಿದ್ದು, ಕಾರಿನ ಒಳಾಂಗಣದಲ್ಲಿ ಗರಿಷ್ಠ ಸ್ಥಳಾವಕಾಶವನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.
ಕಾರಿನ ವಿನ್ಯಾಸವು ಅತ್ಯಂತ ಕಾಂಪ್ಯಾಕ್ಟ್ ಆಗಿದ್ದು, 3.39 ಮೀಟರ್ ಉದ್ದವನ್ನು ಹೊಂದಿರಲಿದೆ. ಕಾರಿನ ಒಳಗೆ ತಂತ್ರಜ್ಞಾನ ಸ್ನೇಹಿ ಅನುಭವ ನೀಡಲು ಡ್ಯುಯಲ್ ಡಿಸ್ಪ್ಲೇ (ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಸೆಂಟ್ರಲ್ ಇನ್ಫೋಟೈನ್ಮೆಂಟ್ ಸಿಸ್ಟಮ್), ಆಂಬಿಯೆಂಟ್ ಲೈಟಿಂಗ್, ಚೌಕಾಕಾರದ (squircle) ಸ್ಟೀರಿಂಗ್ ವೀಲ್ ಹಾಗೂ ಡ್ರೈವ್ ಮೋಡ್ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಸೋರಿಕೆಯಾದ ಸ್ಪೈ ಚಿತ್ರಗಳಲ್ಲಿ 360-ಡಿಗ್ರಿ ಕ್ಯಾಮೆರಾ ಹಾಗೂ ಸುರಕ್ಷತೆಗಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ತಂತ್ರಜ್ಞಾನದ ಅಳವಡಿಕೆಯ ಸುಳಿವು ಕೂಡ ಲಭ್ಯವಾಗಿದೆ.
ನಿರೀಕ್ಷಿತ ಬ್ಯಾಟರಿ ಸಾಮರ್ಥ್ಯ ಹಾಗೂ ಮೈಲೇಜ್
ಈ ಎಲೆಕ್ಟ್ರಿಡ್ ಹ್ಯಾಚ್ಬ್ಯಾಕ್ನ ನಿಖರವಾದ ಬ್ಯಾಟರಿ ಸಾಮರ್ಥ್ಯದ ಕುರಿತು ಕಂಪನಿಯು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾರುಕಟ್ಟೆ ತಜ್ಞರ ಪ್ರಕಾರ ಈ ಕಾರಿನಲ್ಲಿ 29kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸುವ ಸಾಧ್ಯತೆ ದಟ್ಟವಾಗಿದೆ. ಇದು ಭಾರತೀಯ ರಸ್ತೆಗಳಲ್ಲಿ ಒಂದು ಬಾರಿಯ ಪೂರ್ಣ ಚಾರ್ಜ್ಗೆ ಸುಮಾರು 270 ಕಿಲೋಮೀಟರ್ಗಳ ರೇಂಜ್ (ಮೈಲೇಜ್) ನೀಡುವ ನಿರೀಕ್ಷೆಯಿದೆ. ನಗರ ಪ್ರದೇಶದ ದಿನನಿತ್ಯದ ಓಡಾಟಕ್ಕೆ ಯಾವುದೇ ಆತಂಕವಿಲ್ಲದೆ ಬಳಸಲು ಇದು ಹೇಳಿ ಮಾಡಿಸಿದಂತಿರಲಿದೆ.
ಜಾಗತಿಕ ಬಿಡುಗಡೆ ಬಳಿಕ ಭಾರತಕ್ಕೆ ಎಂಟ್ರಿ
ಸುಜುಕಿ ಕಂಪನಿಯು ಈ ನೂತನ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಅನ್ನು ಮೊದಲಿಗೆ 2026-27ರ ಆರ್ಥಿಕ ವರ್ಷದಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ (ವಿಶೇಷವಾಗಿ ಯುಕೆ ಮಾರುಕಟ್ಟೆಯಲ್ಲಿ) ಬಿಡುಗಡೆ ಮಾಡುವ ಬಲವಾದ ಇರಾದೆ ಹೊಂದಿದೆ. ಯುಕೆ ಮಾರುಕಟ್ಟೆಯಲ್ಲಿ ಈ ಕಾರು ಹೊಂಡಾ ಸೂಪರ್-ಎನ್ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಸುಜುಕಿ ಯುಕೆ ಮುಖ್ಯಸ್ಥ ಡೇವಿಡ್ ಕೇಟ್ಲಿ ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆಯ ಯಶಸ್ಸಿನ ಬಳಿಕ ಈ ಕಾರು ಭಾರತೀಯ ರಸ್ತೆಗಳನ್ನು ಪ್ರವೇಶಿಸಲಿದೆ. ಭಾರತದಲ್ಲಿ ಬಿಡುಗಡೆಯಾಗುವಾಗ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸಲು, ವಾಹನದ ಪ್ಲಾಟ್ಫಾರ್ಮ್ ಹಾಗೂ ಭಾಗಗಳನ್ನು ಸ್ಥಳೀಯವಾಗಿಯೇ ಅತಿ ಹೆಚ್ಚು ಮೊತ್ತದಲ್ಲಿ ಉತ್ಪಾದಿಸುವ ಯೋಜನೆ ಮಾರುತಿಗಿದೆ. ಭಾರತದಲ್ಲಿ ಲಾಂಚ್ ಆದಾಗ ಇದು ಟಾಟಾ ಟಿಯಾಗೋ ಇವಿ ಹಾಗೂ ಎಂಜಿ ಕಾಮೆಟ್ ಇವಿಗಳ ಮಾರುಕಟ್ಟೆಯ ಪಾಲಿಗೆ ಕಠಿಣ ಸವಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದನ್ನೂ ಓದಿ : ಮಾರುತಿ ಆಲ್ಟೊಗೆ 105 ಪರ್ಸೆಂಟ್ ದಾಖಲೆಯ ಬೇಡಿಕೆ.. ಪಾತಾಳಕ್ಕಿಳಿದ ಹುಂಡೈ ಐ20 ಮಾರಾಟ!



















