ಬೆಂಗಳೂರು : ಕಮಲ ಪಾಳಯದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಸಂಸದ ಡಾ. ಕೆ.ಸುಧಾಕರ್ ನಡುವಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಜೆಪಿ ವರಿಷ್ಠರು ಈಗಾಗಲೇ ಎರಡು ಬಾರಿ ಸಭೆ ನಡೆಸಿ ಇಬ್ಬರು ನಾಯಕರಿಗೆ ಬುದ್ಧಿ ಹೇಳಿದ್ದರೂ ಆಂತರಿಕ ಮುನಿಸು ಸಂಪೂರ್ಣವಾಗಿ ಶಮನವಾಗಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಹೌದು.. ಎಸ್.ಆರ್. ವಿಶ್ವನಾಥ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಂಸದ ಡಾ. ಕೆ. ಸುಧಾಕರ್ ಗೈರಾಗಿರುವುದು ಸದ್ಯ ಹೊಸ ಚರ್ಚೆಗೆ ಕಾರಣವಾಗಿದೆ. ವಿಶ್ವನಾಥ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮೂಲಕವೂ ಸುಧಾಕರ್ ಶುಭಾಶಯ ತಿಳಿಸಿಲ್ಲ. ಕಾರ್ಯಕ್ರಮಕ್ಕೆ ಹಾಜರಾಗುವಂತೆ ಬಿಜೆಪಿ ಉಸ್ತುವಾರಿಯಿಂದ ಸೂಚನೆ ನೀಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದರೂ, ಸುಧಾಕರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ. ವಿಶ್ವನಾಥ್ ಬೆಂಬಲಿಗರ ಕಡೆಯಿಂದ ಆಹ್ವಾನ ಕಳುಹಿಸಲಾಗಿತ್ತು ಎನ್ನಲಾಗಿದ್ದರೂ, ಕಾರ್ಯಕ್ರಮಕ್ಕೆ ಸುಧಾಕರ್ ಗೈರಾಗಿದ್ದಾರೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಎಸ್.ಆರ್. ವಿಶ್ವನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕೇಂದ್ರ ಸಚಿವ ಸುರೇಶ್ ಗೋಪಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವನಾಥ್ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ, ಸಂಸದ ಡಾ. ಕೆ. ಸುಧಾಕರ್ ಅವರ ಗೈರುಹಾಜರಿ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಮೂಲಕ ಚಿಕ್ಕಬಳ್ಳಾಪುರ–ಯಲಹಂಕ ರಾಜಕೀಯದಲ್ಲಿ ಮತ್ತೆ ವಿಶ್ವನಾಥ್ ವರ್ಸಸ್ ಸುಧಾಕರ್ ಕದನ ಶುರುವಾಯಿತೇ ಎಂಬ ಪ್ರಶ್ನೆಯೂ ಎದುರಾಗಿದೆ. ಹೀಗಾಗಿ ಕಮಲ ಪಾಳಯದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತೆ ಶುರುವಾಗಿದೆಯೇ ಎಂಬುದು ಇದೀಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ನಂದನ್ ನೀಲೆಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ; ಪ್ರಧಾನಿ ಮೋದಿ ಘೋಷಣೆ!


















