ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಭಾರತ, ಚೀನಾ, ಯುಕೆ ಸೇರಿದಂತೆ ತನ್ನ ಕನಿಷ್ಠ 60 ಪ್ರಮುಖ ವ್ಯಾಪಾರಿ ಪಾಲುದಾರ ದೇಶಗಳ ಮೇಲೆ ಹೊಸ ಆಮದು ಸುಂಕವನ್ನು ಘೋಷಿಸಿದೆ. ಬಲವಂತದ ಕಾರ್ಮಿಕ ಪದ್ಧತಿಯ (Forced Labour) ಮೂಲಕ ತಯಾರಾಗುವ ಸರಕುಗಳ ಮೇಲೆ ಸೂಕ್ತ ನಿಷೇಧ ಹೇರಲು ವಿಫಲವಾಗಿವೆ ಎಂಬ ಕಾರಣ ನೀಡಿ, ಶೇ.10ರಿಂದ ಶೇ.12.5 ರವರೆಗೆ ಆಮದು ಸುಂಕವನ್ನು ವಿಧಿಸಲಾಗಿದೆ.
ಅಮೆರಿಕನ್ನರು ವಿದೇಶಿ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಟ್ರಂಪ್ ಅವರ ಈ ಕಠಿಣ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶ ಎಂದು ವಿಶ್ಲೇಷಿಸಲಾಗಿದೆ.
ಚೀನಾಗೆ ಶೇ. 12.5, ಭಾರತಕ್ಕೆ ಶೇ. 10ರಷ್ಟು ಸುಂಕ ಏಕೆ?
ಶ್ವೇತಭವನದ ಹೊಸ ಆದೇಶದಂತೆ, ಬಲವಂತದ ಶ್ರಮದಿಂದ ತಯಾರಾಗುವ ಉತ್ಪನ್ನಗಳ ಆಮದನ್ನು ಸಂಪೂರ್ಣವಾಗಿ ತಡೆಯಲು ಯಾವುದೇ ಕಾನೂನು ತರದೇ ಇರುವ ಚೀನಾ, ಜಪಾನ್ ಮತ್ತು ಬ್ರಿಟನ್‌ನಂತಹ ದೇಶಗಳಿಗೆ ಶೇ.12.5ರಷ್ಟು ಗರಿಷ್ಠ ಸುಂಕ ವಿಧಿಸಲಾಗಿದೆ.
ಮತ್ತೊಂದೆಡೆ, ಅಂತಹ ಕಾನೂನುಗಳನ್ನು ಈಗಾಗಲೇ ಜಾರಿಗೆ ತಂದಿರುವ ಅಥವಾ ನಿಷೇಧ ಸಂಬಂಧಿತ ಒಪ್ಪಂದಗಳಿಗೆ ಬದ್ಧವಾಗಿರುವ ಭಾರತ, ಶ್ರೀಲಂಕಾ ಮತ್ತು ಐರೋಪ್ಯ ಒಕ್ಕೂಟದಂತಹ ದೇಶಗಳ ಮೇಲಿನ ಸುಂಕವನ್ನು ಶೇ.10ರಲ್ಲಿ ಕಾಯ್ದುಕೊಳ್ಳಲಾಗಿದೆ. ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಭಾರತಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಸುಂಕದ ಪ್ರಮಾಣವನ್ನು ಶೇ.10ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ
ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ಟ್ರಂಪ್ ಆಡಳಿತ ಈ ಹಿಂದೆ ಜಾರಿ ಮಾಡಿದ್ದ ‘ಲಿಬರೇಶನ್ ಡೇ’ ಸುಂಕ ನೀತಿಯನ್ನು ರದ್ದುಗೊಳಿಸಿತ್ತು. ಅದಕ್ಕೆ ಪರ್ಯಾಯವಾಗಿ ಜಾರಿಯಲ್ಲಿದ್ದ ಮಧ್ಯಂತರ ಸುಂಕದ ಅವಧಿಯು ಶುಕ್ರವಾರ ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ, ನೂತನ ಸುಂಕ ನೀತಿಯು ಜಾರಿಗೆ ಬರಲಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಸಮಾನ ವ್ಯಾಪಾರ ಪದ್ಧತಿಯನ್ನು ತಡೆಯಲು ಈ ಕ್ರಮ ಅಗತ್ಯವಾಗಿತ್ತು ಎಂದು ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಸಮರ್ಥಿಸಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಂಕದ ಭೀತಿ
ವರದಿಗಳ ಪ್ರಕಾರ, ಟ್ರಂಪ್ ಆಡಳಿತವು ಮುಂಬರುವ ವಾರಗಳಲ್ಲಿ ಇನ್ನೂ ಹೆಚ್ಚಿನ ಸುಂಕವನ್ನು ವಿಧಿಸಲು ಯೋಜಿಸುತ್ತಿದೆ. ವಿಶೇಷವಾಗಿ, ತಮ್ಮ ದೇಶೀಯ ಕೈಗಾರಿಕೆಗಳಿಗೆ ಹೆಚ್ಚಿನ ಸಬ್ಸಿಡಿ ನೀಡಿ, ಜಾಗತಿಕ ಮಾರುಕಟ್ಟೆಗೆ ಅಗ್ಗದ ದರದಲ್ಲಿ ಉತ್ಪನ್ನಗಳನ್ನು ಹರಿಸುವ ದೇಶಗಳ ಮೇಲೆಯೂ ಹೆಚ್ಚಿನ ನಿಯಂತ್ರಣ ಹೇರಲು ಶ್ವೇತಭವನ ಹೊಸ ಕಾನೂನು ರೂಪಿಸುತ್ತಿದೆ. ಆದಾಗ್ಯೂ, ತೈಲ, ನೈಸರ್ಗಿಕ ಅನಿಲ ಹಾಗೂ ಯುಎಸ್-ಮೆಕ್ಸಿಕೋ-ಕೆನಡಾ ಒಪ್ಪಂದಕ್ಕೆ ಒಳಪಡುವ ಉತ್ಪನ್ನಗಳಿಗೆ ಈ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗಿದೆ.



















