ನವದೆಹಲಿ: ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರಾಯನ್ ವಾದ್ರಾ ಅವರು ನವದೆಹಲಿಯ ರಾಜಸ್ಥಾನ ಸರ್ಕಾರಕ್ಕೆ ಸೇರಿದ ‘ಬಿಕಾನೇರ್ ಹೌಸ್’ನಲ್ಲಿ ಹಮ್ಮಿಕೊಂಡಿದ್ದ ‘ನೋ ಐಡಿಯಾ ಈಸ್ ಫೈನಲ್’ ಎಂಬ ಕಲಾಪ್ರದರ್ಶನವು ಇದೀಗ ವಿವಾದಕ್ಕೀಡಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವಜನರ ಪ್ರತಿಭಟನೆಗಳನ್ನು ಆಧರಿಸಿದ ಕಲಾಕೃತಿಗಳನ್ನು ಈ ಪ್ರದರ್ಶನದಲ್ಲಿ ಅಳವಡಿಸಲಾಗಿತ್ತು. ಆದರೆ, ಪ್ರದರ್ಶನ ಉದ್ಘಾಟನೆಗೊಳ್ಳುವ ಕೆಲವೇ ಗಂಟೆಗಳ ಮುಂಚೆ ಪ್ರದರ್ಶನದಲ್ಲಿದ್ದ ಒಟ್ಟು 105 ಫೋಟೋಗಳ ಪೈಕಿ 74ಕ್ಕೂ ಹೆಚ್ಚು ಚಿತ್ರಗಳನ್ನು ತೆರವುಗೊಳಿಸುವಂತೆ ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ಒತ್ತಾಯಿಸಿದೆ ಎಂದು ರಾಯನ್ ವಾದ್ರಾ ಆರೋಪಿಸಿದ್ದಾರೆ.
ವಿಷಯ ಮತ್ತು ಸಮಯದ ಗಂಭೀರತೆ ಕಾರಣ
ಯುವ ಸಮೂಹದ ಪ್ರತಿಭಟನೆಗಳ ಕಾವ್ಯ ಮತ್ತು ಲಯವನ್ನು ಕಲಾತ್ಮಕವಾಗಿ ಸೆರೆಹಿಡಿಯುವುದೇ ನನ್ನ ಉದ್ದೇಶವಾಗಿತ್ತೇ ಹೊರತು ಯಾವುದೇ ಪ್ರಚೋದನೆ ಅಲ್ಲ ಎಂದು ರಾಯನ್ ಸ್ಪಷ್ಟಪಡಿಸಿದ್ದಾರೆ. ಪ್ರದರ್ಶನದ ಸಮಯ ಹಾಗೂ ಸನ್ನಿವೇಶವು ಸರಿಯಾಗಿಲ್ಲ ಎಂದು ಪ್ರಧಾನ ನಿವಾಸಿ ಆಯುಕ್ತ ರೋಹಿತ್ ಕುಮಾರ್ ಅವರು ತಮಗೆ ಮೌಖಿಕವಾಗಿ ತಿಳಿಸಿದ್ದರು. ಬಳಿಕ ಉಪ ನಿವಾಸಿ ಆಯುಕ್ತ ಮನೋಜ್ ಸಿಂಗ್ ಅವರ ಸಹಿಯೊಂದಿಗೆ ಲಿಖಿತ ಸೂಚನೆಯನ್ನು ನೀಡಲಾಗಿದ್ದು, ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಫೋಟೋಗಳನ್ನು ತೆಗೆಯುವಂತೆ ತಾಕೀತು ಮಾಡಲಾಗಿದೆ ಎಂದು ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತ್ರಿವರ್ಣ ಧ್ವಜದ ಚಿತ್ರಕ್ಕೂ ಬಿಡದ ಕತ್ತರಿ
ಪ್ರದರ್ಶನದಿಂದ ಒಟ್ಟು 75 ಫೋಟೋಗಳನ್ನು ತೆಗೆದುಹಾಕುವಂತೆ ಅಥವಾ ಇಡೀ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಬೆದರಿಕೆ ಹಾಕಲಾಗಿತ್ತು. ಇದರಲ್ಲಿ ರಾಷ್ಟ್ರಧ್ವಜ (ತ್ರಿವರ್ಣ ಧ್ವಜ) ಹೊಂದಿದ್ದ ಎರಡು ಭಾವಚಿತ್ರಗಳೂ ಸೇರಿದ್ದವು. ಈ ಫೋಟೋಗಳನ್ನು ತೆಗೆಯಲು ಆರಂಭದಲ್ಲಿ ನಾನು ನಿರಾಕರಿಸಿದ್ದೆ. ಆದರೆ ನಾನು ಸ್ಥಳದಲ್ಲಿಲ್ಲದ ಸಮಯದಲ್ಲಿ ಸಿಬ್ಬಂದಿ ಅವುಗಳಲ್ಲಿ ಒಂದು ರಾಷ್ಟ್ರಧ್ವಜದ ಫೋಟೋವನ್ನು ಬಲವಂತವಾಗಿ ತೆಗೆದುಹಾಕಿದ್ದಾರೆ ಎಂದು ರಾಯನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ತೀವ್ರ ಆಕ್ರೋಶ
ಮಗನ ಕಲಾಪ್ರದರ್ಶನದ ಮೇಲಿನ ಸೆನ್ಸಾರ್‌ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ಇದು ಅತ್ಯಂತ ಹಾಸ್ಯಾಸ್ಪದ ಮತ್ತು ಯುವಕರ ಧ್ವನಿಯನ್ನು ಹತ್ತಿಕ್ಕುವ ಯತ್ನ ಎಂದು ಕಿಡಿಕಾರಿದ್ದಾರೆ. ಪ್ರದರ್ಶನದಲ್ಲಿದ್ದ ಫೋಟೋಗಳು ಕೇವಲ ದೃಶ್ಯ ರೂಪದ ದಾಖಲೀಕರಣವಾಗಿದ್ದು, ಯಾವುದೇ ಅವಹೇಳನಕಾರಿ ಅಂಶಗಳು ಅವುಗಳಲ್ಲಿ ಇರಲಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಸಂಸದ ಹಾಗೂ ವಕ್ತಾರ ಪವನ್ ಖೇರಾ ಅವರು, ದೇಶದಲ್ಲಿ ಕಲಾ ಸ್ವಾತಂತ್ರ್ಯಕ್ಕಾಗಲಿ ಅಥವಾ ಸ್ವತಃ ತ್ರಿವರ್ಣ ಧ್ವಜಕ್ಕಾಗಲಿ ಸುರಕ್ಷತೆ ಇಲ್ಲದಂತಾಗಿದೆ. ಕಲೆ ಹಾಗೂ ವಿಚಾರಗಳಿಗೆ ಅಂಜುವ ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಗ್ಗೊಲೆ ಮಾಡುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಉಗ್ರ ಒಸಾಮಾ ಅಡಗಿದ್ದ ಪಾಕ್‌ನಲ್ಲೇ ದಾವೂದ್ ಇಬ್ರಾಹಿಂ ವಾಸ: ವಿಶ್ವಸಂಸ್ಥೆ ವರದಿ ಉಲ್ಲೇಖಿಸಿ ಭಾರತ ತರಾಟೆ


















