ಪ್ಯಾರಿಸ್: ಫ್ರಾನ್ಸ್ನಲ್ಲಿ ಭುಗಿಲೆದ್ದಿರುವ ತೀವ್ರ ಅಶಾಂತಿ ಮತ್ತು ಪ್ರತಿಭಟನೆಯ ನಡುವೆ ದುಬಾರಿ ಬ್ರಾಂಡ್ಗಳ ಮಳಿಗೆಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ವಸ್ತುಗಳನ್ನು ಲೂಟಿ ಮಾಡಲಾಗಿದೆ. ಸುಮಾರು 4.25 ದಶಲಕ್ಷ ಯುರೋಗಳಿಗೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಲೂಟಿ ಮಾಡಲಾದ ಡಿಸೈನರ್ ಬ್ಯಾಗ್ಗಳು, ಸುಗಂಧದ್ರವ್ಯಗಳು ಮತ್ತು ಕಾಸ್ಮೆಟಿಕ್ಸ್ ಗಳನ್ನು ಅಲ್ಲಿನ ಬೀದಿಗಳಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ ಮಾರ್ಸಿಲ್ಲೆಯಲ್ಲಿರುವ ರೋಲೆಕ್ಸ್ ಮಳಿಗೆಯೊಂದರಲ್ಲಿ ಸುಮಾರು 3 ದಶಲಕ್ಷ ಯುರೋ ಹಾಗೂ ಬೋರ್ಡೆಕ್ಸ್ನಲ್ಲಿರುವ ಲೂಯಿ ವಿಟಾನ್ ಮಳಿಗೆಯಿಂದ 1.25 ದಶಲಕ್ಷ ಯುರೋ ಮೌಲ್ಯದ ವಸ್ತುಗಳು ಲೂಟಿಯಾಗಿವೆ ಎಂದು ವರದಿಯಾಗಿದೆ. ಈ ಘಟನೆಗಳು ಐಷಾರಾಮಿ ಸರಕುಗಳ ಅಕ್ರಮ ಮಾರುಕಟ್ಟೆ ವಹಿವಾಟಿನ ಬಗ್ಗೆ ಆತಂಕ ಮೂಡಿಸಿವೆ.
ಬೀದಿಗಳಲ್ಲಿ ಅಗ್ಗದ ಬೆಲೆಗೆ ಐಷಾರಾಮಿ ವಸ್ತುಗಳ ಮಾರಾಟ
ಗಲಭೆಯ ವೇಳೆ ಲೂಟಿಯಾದ ವಸ್ತುಗಳನ್ನು ದುಷ್ಕರ್ಮಿಗಳು ಬೀದಿಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ. ಎಂದಿಗಿಂತಲೂ ಶೇ.90ರಷ್ಟು ಕಡಿಮೆ ಬೆಲೆಗೆ ಈ ಐಷಾರಾಮಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಮತ್ತು ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ವಸ್ತುಗಳ ಮೂಲ ಮತ್ತು ಅವುಗಳ ಅಸಲಿಯತ್ತು ಇನ್ನೂ ಅಧಿಕೃತವಾಗಿ ದೃಢೀಕೃತಗೊಂಡಿಲ್ಲ. ಪ್ಯಾರಿಸ್, ಮಾರ್ಸಿಲ್ಲೆ ಮತ್ತು ಬೋರ್ಡೆಕ್ಸ್ ಸೇರಿದಂತೆ ಫ್ರಾನ್ಸ್ನ ಹಲವು ಪ್ರಮುಖ ನಗರಗಳಲ್ಲಿ ವಾರದ ಕೊನೆಯಲ್ಲಿ ಮುಖಗವಸು ಧರಿಸಿದ ಗುಂಪುಗಳು ಹೈ-ಎಂಡ್ ಚಿಲ್ಲರೆ ಮಳಿಗೆಗಳ ಮೇಲೆ ದಾಳಿ ನಡೆಸಿದ್ದವು. ಲೂಯಿ ವಿಟಾನ್, ಹರ್ಮೆಸ್, ಡಿಯರ್ ಮತ್ತು ರೋಲೆಕ್ಸ್ನಂತಹ ವಿಶ್ವವಿಖ್ಯಾತ ಬ್ರಾಂಡ್ಗಳು ಈ ದರೋಡೆಗೆ ಬಲಿಯಾಗಿವೆ. ಕೇವಲ ಐಷಾರಾಮಿ ಅಂಗಡಿಗಳಷ್ಟೇ ಅಲ್ಲದೆ, ಸೂಪರ್ಮಾರ್ಕೆಟ್ಗಳು, ಬಟ್ಟೆ ಅಂಗಡಿಗಳು ಮತ್ತು ಔಷಧಾಲಯಗಳನ್ನೂ ಸಹ ಗುರಿಯಾಗಿಸಲಾಗಿತ್ತು.
ಆನ್ಲೈನ್ ಮಾರುಕಟ್ಟೆ ವೇದಿಕೆಗಳಿಗೂ ಹಬ್ಬಿದ ಲೂಟಿ ಕಳಂಕ
ಬೀದಿಗಳಷ್ಟೇ ಅಲ್ಲದೆ ಆನ್ಲೈನ್ ಮಾರಾಟ ತಾಣಗಳಿಗೂ ಈ ಕಳ್ಳತನದ ಬಿಸಿ ತಟ್ಟಿದೆ. ಸೆಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟಕ್ಕೆ ಹೆಸರುವಾಸಿಯಾದ ‘ವಿಂಟೆಡ್’ ನಂತಹ ಜನಪ್ರಿಯ ಆನ್ಲೈನ್ ವೇದಿಕೆಗಳಲ್ಲಿ ಲೂಟಿಯಾದ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಬಿಸಿ ವರದಿಯ ಪ್ರಕಾರ, ವಾರದ ಕೊನೆಯ ಗಲಭೆಯ ನಂತರ ಈ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ಲೂಟಿ ಸರಕುಗಳ ಮಾರಾಟದ ಪಟ್ಟಿಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ಲೂಯಿ ವಿಟಾನ್, ಸೆಲಿನ್ ಮತ್ತು ಹರ್ಮೆಸ್ನಂತಹ ಬ್ರಾಂಡ್ಗಳ ವಸ್ತುಗಳು ಇದರಲ್ಲಿ ಸೇರಿವೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಂಟೆಡ್ ಸಂಸ್ಥೆ, ಲೂಟಿಗೆ ಸಂಬಂಧಿಸಿದ ಅನುಮಾನಾಸ್ಪದ ಜಾಹೀರಾತುಗಳನ್ನು ತಕ್ಷಣವೇ ಗುರುತಿಸಿ ತೆಗೆದುಹಾಕಲು ಕ್ರಮ ಕೈಗೊಂಡಿದೆ. ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ವರದಿ ಪ್ರಕಾರ, ಈ ವಾರದ ಹಿಂಸಾಚಾರದಿಂದಾಗಿ 2,000ಕ್ಕೂ ಹೆಚ್ಚು ವ್ಯಾಪಾರ ವಹಿವಾಟುಗಳಿಗೆ ನೇರ ಹಾನಿಯಾಗಿದೆ.
ಪ್ರತಿಭಟನೆಗೇನು ಕಾರಣ?
ಶೈಕ್ಷಣಿಕ ವ್ಯವಸ್ಥೆಯ ನ್ಯೂನತೆಗಳು, ತರಗತಿಗಳ ಕೊರತೆ ಮತ್ತು ಶಿಕ್ಷಕರ ಸಂಕಷ್ಟಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ಆರಂಭಿಸಿದ ಸಣ್ಣ ಮಟ್ಟದ ಪ್ರತಿಭಟನೆ, ಕ್ರಮೇಣ ಜೀವನಮಟ್ಟದ ಕುಸಿತ ಹಾಗೂ ಹಣದುಬ್ಬರದ ವಿರುದ್ಧದ ವ್ಯಾಪಕ ಜನಕ್ರೋಶವಾಗಿ ಮಾರ್ಪಟ್ಟಿದೆ. ಅಂಗಡಿಗಳ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಮಳಿಗೆಗಳ ಗಾಜಿನ ಕಿಟಕಿಗಳ ಮೇಲೆ “ಸಿರಿಮಂತರಿಗೆ ತೆರಿಗೆ ಹಾಕಿ” (Tax the rich) ಎಂಬ ಸಂದೇಶಗಳನ್ನು ಬರೆದು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಾಶದ ಜತೆಗೆ ನೌಕರರ ಕಚೇರಿಗಳು ಮತ್ತು ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ. ಈ ವ್ಯಾಪಕ ಹಿಂಸಾಚಾರವು ದೇಶದ ಕಾನೂನು ಸುವ್ಯವಸ್ಥೆಯ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಶಸ್ತ್ರಾಸ್ತ್ರ ಸಾಗಿಸಿದ್ದ ಇಬ್ಬರು ಮಹಿಳೆಯರೂ ಸೆರೆ



















