ಗಾಂಧಿನಗರ: ಪ್ರಸಕ್ತ ಮುಂಗಾರು ಋತುವಿನಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಬರಗಾಲದ ಛಾಯೆಯಲ್ಲಿದ್ದರೆ, ಗುಜರಾತ್ ಸೇರಿದಂತೆ ಉತ್ತರದ ಕೆಲವು ರಾಜ್ಯಗಳಲ್ಲಿ ಪ್ರಕೃತಿಯ ವಿಕೋಪ ತೀವ್ರಗೊಂಡಿದೆ. ದಕ್ಷಿಣ ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಸೃಷ್ಟಿಯಾದ ಜಲಪ್ರಳಯದಂತಹ ವಾತಾವರಣವು ಹೊಸ ದಾಖಲೆಯನ್ನು ಬರೆದಿದೆ. ನವದೆಹಲಿ ನಗರವು ಇಡೀ ವರ್ಷದಲ್ಲಿ ಪಡೆಯುವ ಒಟ್ಟು ಮಳೆಯ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆ ಗುಜರಾತ್‌ನ ಒಂದು ಸಣ್ಣ ಮೂಲೆಯಲ್ಲಿ ಕೇವಲ 24 ಗಂಟೆಗಳಲ್ಲಿ ಸುರಿದಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ (SEOC) ಮಾಹಿತಿಯ ಪ್ರಕಾರ, ವಲ್ಸಾದ್ ಜಿಲ್ಲೆಯ ಉಂಬರ್‌ಗಾಂವ್‌ನಲ್ಲಿ ಜುಲೈ 22ರ ಬೆಳಿಗ್ಗೆ 6 ರಿಂದ ಜುಲೈ 23ರ ಬೆಳಿಗ್ಗೆ 6ರವರೆಗಿನ ಅವಧಿಯಲ್ಲಿ 906 ಮಿ.ಮೀ. ಮಳೆಯಾಗಿದೆ. ದೆಹಲಿಯ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 700 ರಿಂದ 800 ಮಿಮೀ ಆಗಿದ್ದು, ಉಂಬರ್‌ಗಾಂವ್ ಒಂದೇ ದಿನದಲ್ಲಿ ದೆಹಲಿಯ ವಾರ್ಷಿಕ ಮಳೆಯ ಶೇಕಡಾ 113 ರಷ್ಟು ಪ್ರಮಾಣವನ್ನು ಪಡೆದುಕೊಂಡಿದೆ.
ಭಾರಿ ಮಳೆಗೆ ರಸ್ತೆಗಳು ಜಲಾವೃತ: 1,200 ಜನರ ರಕ್ಷಣೆ
ಧಾರಾಕಾರ ಮಳೆಯಿಂದಾಗಿ ದಕ್ಷಿಣ ಗುಜರಾತ್‌ನಾದ್ಯಂತ ದಿಢೀರ್ ಪ್ರವಾಹ (Flash Floods) ಉಂಟಾಗಿದೆ. ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೂರಾರು ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 1,200 ಜನರನ್ನು ರಕ್ಷಣಾ ಪಡೆಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ. ಉಂಬರ್‌ಗಾಂವ್ ಹೊರತಾಗಿ ಕಪ್ರಾಡಾ (731 ಮಿಮೀ), ನಾನಾಪೋಂಧ (643 ಮಿಮೀ), ಧರಂಪುರ (499 ಮಿಮೀ), ಮತ್ತು ವಲ್ಸಾದ್ ನಗರ (403 ಮಿಮೀ) ಭಾಗಗಳಲ್ಲೂ ಭಾರೀ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ 24 ಗಂಟೆಗಳಲ್ಲಿ 204.5 ಮಿಮೀಗೂ ಹೆಚ್ಚು ಮಳೆಯಾದರೆ ಅದನ್ನು “ಅತ್ಯಧಿಕ ಮಳೆ” ಎಂದು ವರ್ಗೀಕರಿಸಲಾಗುತ್ತದೆ, ಆದರೆ ಇಲ್ಲಿ ಅದರ ನಾಲ್ಕರಷ್ಟು ಮಳೆಯಾಗಿದೆ.
ಮಳೆಯ ಭೀಕರತೆಗೆ ಕಾರಣವೇನು?
ಅರಬ್ಬೀ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಬಲವಾದ ನೈಋತ್ಯ ಮಾರುತಗಳು ಹಾಗೂ ಪಶ್ಚಿಮ ಭಾರತದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯವೇ ಈ ಅತಿಯಾದ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ನಿರಂತರವಾಗಿ ಒಂದೇ ಪ್ರದೇಶದಲ್ಲಿ ಮೋಡಗಳು ಸಾಂದ್ರೀಕೃತಗೊಂಡಿದ್ದರಿಂದ ನದಿ ಮತ್ತು ಚರಂಡಿ ವ್ಯವಸ್ಥೆಗಳು ಉಕ್ಕಿ ಹರಿದು ಕ್ಷಣಾರ್ಧದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಗುಜರಾತ್ ನಲ್ಲಿ ಮಳೆಯ ತೀವ್ರತೆ ಮೆಲ್ಲನೆ ಕಡಿಮೆಯಾಗುವ ಮುನ್ಸೂಚನೆ ಇದೆಯಾದರೂ, ಕೆಲವು ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗಲೇ ನೆಲದಲ್ಲಿ ನೀರು ಇಂಗುವ ಸಾಮರ್ಥ್ಯ ಕಡಿಮೆಯಾಗಿರುವುದರಿಂದ ಮತ್ತು ನದಿಗಳು ಉಕ್ಕಿ ಹರಿಯುತ್ತಿರುವುದರಿಂದ, ಸಾಧಾರಣ ಮಳೆಯಾದರೂ ಹೊಸದಾಗಿ ಪ್ರವಾಹ ಬರುವ ಸಾಧ್ಯತೆಯಿದೆ. ಆದ್ದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಹಾಗೂ ಸಾರ್ವಜನಿಕರು ತೀವ್ರ ಜಾಗರೂಕರಾಗಿರಲು ಸರ್ಕಾರ ಸೂಚಿಸಿದೆ.



















